ದಿನಸಿ ಸಾಮಾಗ್ರಿಗಳ ದರ ಏರಿಕೆಯಿಂದ ಜನ ಈಗಾಗಲೇ ಹೈರಾಣಾಗಿದ್ದಾರೆ. ಇದೀಗ ಸಕ್ಕರೆಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಸಕ್ಕರೆ ದರದಲ್ಲಿಯೂ ಭಾರಿ ಏರಿಕೆಯಾಗುವ ಸಾಧ್ಯತೆ ಬಗ್ಗೆ ಇಂಡಿಯನ್ ಶುಗರ್ ಮಿಲ್ಸ್ ಅಸೋಶಿಯೇಷನ್ ಅಂದಾಜಿಸಿದೆ. ಕರ್ನಾಟಕವು ದೇಶದ ಮೂರನೇ ಅತಿ ದೊಡ್ಡ ಸಕ್ಕರೆ ಉತ್ಪಾದಕ ರಾಜ್ಯವಾಗಿದ್ದು, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಮೊದಲೆರಡು ಸ್ಥಾನಗಳಲ್ಲಿವೆ. ರಾಜ್ಯದಲ್ಲಿ ಒಟ್ಟು 89 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ ಸದ್ಯ 72 ಕಾರ್ಖಾನೆಗಳು ಕಾರ್ಯನಿರತವಾಗಿವೆ. ಅಧಿಕೃತ ಮಾಹಿತಿ ಪ್ರಕಾರ, ಈ ಕಾರ್ಖಾನೆಗಳು ಕಳೆದ ವರ್ಷದ ಏಪ್ರಿಲ್ 15 ರ ಅಂತ್ಯಕ್ಕೆ 617.15 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು 59.25 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿ, ಶೇಕಡಾ 9.60 ಲಕ್ಷ ಮೆಟ್ರಿಕ್ ಟನ್ ಇಳುವರಿ ಪಡೆದಿರುತ್ತವೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಕಬ್ಬು ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತಿತ್ತು. ಆದರೆ ಜೂನ್ ನಲ್ಲಿ ಮಳೆ ಕಡಿಮೆಯಾದ ಪರಿಣಾಮ ಕಬ್ಬಿನ ಬೆಲೆ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯದಲ್ಲಿ ಸಕ್ಕರೆ ಉತ್ಪಾದನೆಯು ಶೇಕಡಾ 3.4 ರಷ್ಟು ಕಡಿಮೆಯಾಗಲಿರುವ ಪರಿಣಾಮ ಸಕ್ಕರೆ ದರದಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಅಸೋಶಿಯೇಶನ್ ಅಂದಾಜಿಸಿದೆ.
