ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ ಕುಟುಂಬದವರು ನಮಗೆ ನ್ಯಾಯ ಸಿಕ್ಕಿಲ್ಲ. ಮತ್ತೊಮ್ಮೆ ತನಿಖೆ ಮಾಡಿ ಎಂದು ಮನವಿ ಕೊಟ್ಟಿದ್ದು ಕಾನೂನು ಇಲಾಖೆ ಜೊತೆ ಚರ್ಚೆ ಮಾಡುವದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗುತ್ತಿಗೆದಾರರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೂರು ವರ್ಷಗಳಿಂದ ಸುಮ್ಮನಿದ್ದವರು ಇದೀಗ ಬಿಲ್ ಪಾವತಿ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದು, ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಬೆಳಗಾವಿಯಲ್ಲಿ ಅಂಗವಿಕಲನ ಮೇಲೆ ಪೊಲೀಸರಿಂದ ಹಲ್ಲೆ ವಿಚಾರವಾಗಿ ಇಲಾಖಾ ತನಿಖೆ ನಡೆಸುವದಾಗಿ ಹೇಳಿದರು. ಬಿಜೆಪಿ ಸರ್ಕಾರ ಇದ್ದಾಗ 40 ಪರ್ಸೆಂಟ ಆರೋಪ ಮಾಡಿದ್ದೆವು. ಸರ್ಕಾರ ಬಂದರೆ ತನಿಖೆ ಮಾಡಿಸುವದಾಗಿ ಹೇಳಿದ್ದೆ, ಆ ಪ್ರಕಾರ ಇದೀಗ ತನಿಖೆ ಮಾಡಿಸುತ್ತಿದ್ದೇವೆ ಎಂದರು. ಗುಣಮಟ್ಟದ ಕೆಲಸ ಆಗಿದೆಯೋ ಇಲ್ಲವೋ ಅನ್ನೋದು ತನಿಖೆಯಿಂದ ಗೊತ್ತಾಗುತ್ತದೆ. ಉತ್ತಮ ಕೆಲಸ ಮಾಡುವ ಗುತ್ತಿಗೆದಾರರಿಗೆ ತೊಂದರೆ ಕೊಡಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಬಿಜೆಪಿ ಭ್ರಷ್ಟಾಚಾರ ನಡೆಸಿ, ಧರ್ಮ ರಾಜಕಾರಣ ಮಾಡುತ್ತಿದೆ, ನಾವು 135 ಸ್ಥಾನ ಗೆದ್ದಿದ್ದು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿರುಗೇಟು ಕೊಟ್ಟರು.
