- ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ರಾಜಕೀಯ ಅಂಗಳದಲ್ಲಿ ಸ್ಪೋಟಕ ಬೆಳವಣಿಗೆಗಳು ನಡೆದಿವೆ. ಬಿಜೆಪಿಯಲ್ಲಿ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದರಿಂದ ಕಮಲ ಪಕ್ಷದಿಂದ ಹೊರ ಬಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಇದೀಗ ಕಾಂಗ್ರೇಸ್ ಸೇರಿದ್ದು ಇತಿಹಾಸ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶೆಟ್ಟರರನ್ನು ಸೋಲಿಸಲು ಬಿಜೆಪಿಯ ಘಟಾನುಘಟಿ ಮುಖಂಡರು ಪಣತೊಟ್ಟು ಯಶಸ್ವಿಯಾಗಿದ್ದರು. ಸೋಲು ಅನುಭವಿಸಿದ್ದ ಶೆಟ್ಟರ ಅವರನ್ನು ಕಾಂಗ್ರೇಸ್ ಮೇಲ್ಮನೆಗೆ ಆಯ್ಕೆ ಮಾಡುವ ಮೂಲಕ ಮತ್ತೆ ಶಕ್ತಿ ತುಂಬಿದೆ. ಮಿತಭಾಷಿಯಾದ ಜಗದೀಶ ಶೆಟ್ಟರ ಇದೀಗ ತಮ್ಮ ಶಕ್ತಿ ತೋರಿಸಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬಂದಿದ್ದು, ಕಮಲಕ್ಕೆ ಖೆಡ್ದಾ ತೋಡಲು ಶೆಟ್ಟರ ತಯಾರಿ ಮಾಡಿಕೊಂಡಿದ್ದಾರೆ. ಕರ್ನಾಟಕ ಫೈಲ್ಸ್ ಗೆ ಸಿಕ್ಕ ಮಾಹಿತಿ ಪ್ರಕಾರ ಶೆಟ್ಟರ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡ 15 ಜನರನ್ನು ಸಂಪರ್ಕಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕಟ್ಟಾ ಬೆಂಬಲಿಗ ಮಾಜಿ ಸಚಿವ, ನವಲಗುಂದದ ಮಾಜಿ ಶಾಸಕ ಶಂಕರ ಪಾಟೀಲರನ್ನು ಕಾಂಗ್ರೇಸ್ಸಿಗೆ ತಂದು ಅವರನ್ನೇ ಲೋಕಸಭಾ ಅಭ್ಯರ್ಥಿ ಮಾಡುವ ಹಿನ್ನೇಲೆಯಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಎದುರು ಪಂಚಮಸಾಲಿ ಸಮಾಜದ ಮೇಲೆ ಹಿಡಿತ ಹೊಂದಿರುವ ಶಂಕರ ಪಾಟೀಲ್, ಲೋಕಸಭಾ ಚುನಾವಣೆಯಲ್ಲಿ ಜೋಶಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾಗಿದ್ದು, ಮಾತುಕತೆ ಯಶಸ್ವಿಯಾಗಿದೆಯಂತೆ. ಕುಂದಗೋಳ ಕ್ಷೇತ್ರದಿಂದ ಟಿಕೇಟ್ ಕೇಳಿದ್ದ ಎಸ್ ಐ ಚಿಕ್ಕನಗೌಡರ ಜೊತೆ ಮಾತುಕತೆ ನಡೆಸಿರುವ ಶೆಟ್ಟರ, ಅವರನ್ನು ಕಾಂಗ್ರೇಸ್ಸಿಗೆ ಕರೆತರುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಹಿರಿಯ ಮುಖಂಡ, ವಿ ಸೋಮಣ್ಣರನ್ನು ಕಣಕ್ಕಿಳಿಸುವ ಕುರಿತು ವಿ ಸೋಮಣ್ಣನವರ ಜೊತೆ ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂಬ ಮಾಹಿತಿ ಇದೆ. ಹಿರಿಯೂರಿನ ಮಾಜಿ ಶಾಸಕಿ ಗೊಲ್ಲ ಸಮಾಜದ ಪ್ರಭಾವಿ ಮುಖಂಡೆ ಪೂರ್ಣಿಮಾ ಶ್ರೀನಿವಾಸ ಅವರನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಾಡಲು ಶೆಟ್ಟರ ಯೋಚಿಸಿದ್ದು, ಅವರನ್ನು ಕರೆ ತರಲು ಶೆಟ್ಟರ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಅವರ ಜೊತೆ ಮಾತುಕತೆ ನಡೆದಿದ್ದು, ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಕಮಲಕ್ಕೆ ಖೆಡ್ದಾ ತೋಡಲು ಜಗದೀಶ ಶೆಟ್ಟರ ಇದೀಗ ಮುಂದಾಗಿದ್ದು, ಬಿಜೆಪಿಯ ಮತ್ತಷ್ಟು ಮಾಜಿ ಶಾಸಕರನ್ನು ಶೆಟ್ಟರ ಕಾಂಗ್ರೇಸ್ಸಿಗೆ ಕರೆತರಲು ಮುಂದಾಗಿದ್ದಾರೆ.
