ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆ ಅಖಾಡದಲ್ಲಿ ಬಿಜೆಪಿಗೆ 12 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳಿಗಾಗಿ ಹುಡುಕಾಟ ಶುರುವಾಗಿದೆ. ವಯಸ್ಸು ಮತ್ತು ವರ್ಚಸ್ಸಿನ ಹೆಸರಲ್ಲಿ ಬಿಜೆಪಿಯ 12 ಸಂಸದರಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂದು ಕರ್ನಾಟಕ ಫೈಲ್ಸ್ ಗೆ ವಿಶ್ವಾಸನೀಯ ಮೂಲಗಳು ಖಚಿತಪಡಿಸಿವೆ.
10 ಸಂಸದರಿಗೆ ವಯಸ್ಸಿನ ಕಾರಣದಿಂದ ಬಿಜೆಪಿ ಟಿಕೆಟ್ಟಿಲ್ಲ : ಚಾಮರಾಜನಗರದ ಸಂಸದ ಶ್ರೀನಿವಾಸ ಪ್ರಸಾದ್, ಬೆಂಗಳೂರು ಉತ್ತರದ ಡಿ.ವಿ ಸದಾನಂದಗೌಡ, ಚಿಕ್ಕಬಳ್ಳಾಪುರದ ಬಿ.ಎನ್ ಬಚ್ಚೇಗೌಡ, ತುಮಕೂರಿನ ಬಸವರಾಜಪ್ಪ, ದಾವಣಗೆರೆಯ ಜಿ.ಎಂ ಸಿದ್ದೇಶ್, ಬೆಳಗಾವಿಯ ಮಂಗಳಾ ಅಂಗಡಿ, ಬಾಗಲಕೋಟೆಯ ಪಿ.ಸಿ ಗದ್ದೀಗೌಡರ್, ವಿಜಯಪುರದ ರಮೇಶ್ ಜಿಗಜಿಣಗಿ, ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ, ಕೊಪ್ಪಳದ ಕರಡಿ ಸಂಗಣ್ಣ ಅವರುಗಳಿಗೆ ಬಿಜೆಪಿ ಟಿಕೆಟ್ ನೀಡದಿರಲು ಬಹುತೇಕ ತೀರ್ಮಾನಿಸಿದೆ.
ಇವರಿಗೆಲ್ಲಾ ಡೌಟು :-
ಹಾವೇರಿಯ ಶಿವಕುಮಾರ ಉದಾಸಿ ಸ್ವತಃ ಅವರಾಗಿಯೇ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಕೇಂದ್ರದ ಸಚಿವರೂ ಆಗಿರುವ ಬೀದರ್ ಸಂಸದ ಭಗವಂತ ಖೂಬಾ ಬಿಜೆಪಿ ಶಾಸಕರ ಜೊತೆಗೆ ವೈಮನಸ್ಸು ಹೊಂದಿದ್ದಾರೆ. ಶಾಸಕರಾದ ಪ್ರಭು ಚವ್ಹಾಣ್ ಹಾಗೂ ಶರಣು ಸಲಗರ ಬಹಿರಂಗ ಯುದ್ದ ಸಾರಿರುವುದು ಖೂಬಾ ಟಿಕೆಟ್ ತಪ್ಪಿಸಲಿದೆ ಎನ್ನಲಾಗಿದೆ. ಮಾಜಿ ಸಚಿವರೂ ಆಗಿರುವ ಮಾಲೀಕಯ್ಯ ಗುತ್ತೇದಾರ್ ಕೂಡ ಖೂಬಾ ವಿರುದ್ಧವಿದ್ದಾರೆ.
ಬಳ್ಳಾರಿಯ ದೇವೇಂದ್ರಪ್ಪ ಅವರನ್ನು ವರ್ಚಸ್ಸಿನ ಕಾರಣಕ್ಕೆ ಕೈ ಬಿಟ್ಟು ರಾಮುಲು ಅವರನ್ನ ಅಖಾಡಕ್ಕಿಳಿಸಲು ಬಿಜೆಪಿ ಚರ್ಚಿಸುತ್ತಿದೆ. ಕೋಲಾರದ ಮುನಿಸ್ವಾಮಿ ಅವರಿಗೂ ಟಿಕೆಟ್ ನೀಡದಿರುವ ಚರ್ಚೆ ಇದೆಯಾದರೂ ಪರ್ಯಾಯ ಅಭ್ಯರ್ಥಿ ಯಾರು ಎಂಬುದು ಫೈನಲ್ ಆಗಿಲ್ಲ.
