ಬೆಂಗಳೂರು : ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ 50 ಲಕ್ಷ ರೂಪಾಯಿ ವ್ಯವಸ್ಥೆ ಮಾಡಲು ಹೇಳಿದ್ರು. ಅದನ್ನು ವ್ಯವಸ್ಥೆ ಮಾಡಲಾರೆ ಎಂದದ್ದಕ್ಕೆ ಒಂದು ಅಮಾನತು ಮತ್ತು ನನಗೆ ನೋಟಿಸು ನೀಡಲಾಗಿದೆ ಎಂದು ಪರಿಸರ ಅಧಿಕಾರಿ ಯತೀಶ್ ಲಿಖಿತ ರೂಪದಲ್ಲಿ ಆರೋಪಿಸಿದ್ದಾರೆ.
ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಒಪ್ಪಿಗೆ ನೀಡುವ ಪ್ರಕರಣದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತಾ ತಿಮ್ಮಯ್ಯ ಲಂಚ ಕೇಳಿದ್ದಾರೆ ಎಂದು ಉಲ್ಲೇಖಿಸಿರುವ ಪತ್ರ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದೆ. ಇದೇ ಪ್ರಕರಣದಲ್ಲಿ ಬೊಮ್ಮನಹಳ್ಳಿ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಸುಧಾಕರ್ ಅವರನ್ನು ಅಮಾನತು ಮಾಡಿದ್ದಾರೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷ ಶಾಂತಾ ತಿಮ್ಮಯ್ಯ ಅವರ ಸೂಚನೆ ಮೇರೆಗೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ.ಸಿ ರೇ ಅವರು ಯತೀಶ್ ಗೆ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಗೆ ಉತ್ತರವಾಗಿ ಬರೆದಿರುವ ಪತ್ರದಲ್ಲಿ ಅಧ್ಯಕ್ಷರ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ. ಈ ಪತ್ರವೀಗ ಲೋಕಾಯುಕ್ತ ಮೆಟ್ಟಿಲೇರಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಕೆಲವೇ ದಿನಗಳ ಹಿಂದೆ ಹಂಗಾಮಿ ಸದಸ್ಯ ಕಾರ್ಯದರ್ಶಿ ಸೂರಿ ಪಾಯಲ್ ಹಾಗೂ ಅಧ್ಯಕ್ಷ ಶಾಂತಾ ತಿಮ್ಮಯ್ಯ ನಡುವೆ ಜಟಾಪಟಿಯಾಗಿತ್ತು. ಸಿಎಂ ಮಧ್ಯಪ್ರವೇಶದಿಂದ ಶಾಂತವಾಗಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲೀಗ ಹೊಸ ಸಮರ ಆರಂಭವಾಗಿದೆ. ಇದನ್ನು ನಿಯಂತ್ರಿಸಬೇಕಾದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಜಾಣ ಮೌನ ವಹಿಸಿದ್ದಾರೆ.
