ಮೊಬೈಲ್ ಕಳ್ಳರು ಇದೀಗ ಆಧುನಿಕತೆಯ ಕಡೆ ಗಮನ ಕೊಟ್ಟಿದ್ದಾರೆ. ಮೊಬೈಲ್ ಕದ್ದು ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಲಪಟಾಯಿಸುತ್ತಿದ್ದ ಕಿರಾತಕರನ್ನು ಹೆಡಮುರಿಗೆ ಕಟ್ಟುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳರ ಹಾವಳಿ ಜಾಸ್ತಿಯಾಗಿತ್ತು. ಕಳ್ಳರ ಹಿಂದೆ ಬೆನ್ನು ಬಿದ್ದಿದ್ದ ಪೊಲೀಸರು ಕಡೆಗೂ ಮೂವರು ಅಂತಾರಾಜ್ಯ ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಕಳ್ಳರು ಆಂಧ್ರಪ್ರದೇಶ ಹಾಗೂ ತೆಲಂಗಾಣ ಮೂಲದವರಾಗಿದ್ದಾರೆ. ಗುಂಜಾರಿಯಾ ಸಾಯಿಕುಮಾರ ಮತ್ತು ಅಕುಲ್ ವಡಿವೇಲು ಜೊತೆ ಒಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಬಂಧಿತರಿಂದ ವಿವಿಧ ಕಂಪನಿಯ 27 ಮೊಬೈಲ್ ಗಳು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಇಂಡಿಕಾ ಕಾರು ಹಾಗೂ 1.36 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
