ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಹೀಗಾಗಿ ಹೋರಾಟವನ್ನು ಮತ್ತೆ ಆರಂಭಿಸಲಾಗುವದೆಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 2 ಎ ಹಾಗೂ 2 ಡಿ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ. ಮೀಸಲಾತಿ ವಿಷಯವಾಗಿ ಮುಖ್ಯಮಂತ್ರಿಗಳು ಬಜೆಟ್ ನಂತರ ಸಭೆ ಕರೆದು ಪರಿಶೀಲನೆ ಮಾಡುವದಾಗಿ ಹೇಳಿದ್ದರು, ಆದರೆ ಇನ್ನು ಸಭೆ ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೀಸಲಾತಿ ವಿಚಾರದಲ್ಲಿ ನಮಗೆ ಸಮುದಾಯದಲ್ಲಿ ನಿರಾಸೆ ಮೂಡಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಆರಂಭ ಮಾಡುತ್ತೇವೆ. ಸಮುದಾಯ ಸಹ ಹೋರಾಟಕ್ಕೆ ಸಿದ್ದವಾಗಿದೆ ಎಂದು ಸ್ವಾಮೀಜಿ ತಿಳಿಸಿದರು. 2 ಎ ಹಾಗೂ 2 ಡಿ ಮೀಸಲಾತಿ ಕೊಡದೆ ಹೋದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಓ ಬಿ ಸಿ ಮೀಸಲಾತಿ ಪಟ್ಟಿಯಲ್ಲಿ ಲಿಂಗಾಯತ ಸಮುದಾಯವನ್ನು ಸೇರಿಸಲಿ ಎಂದು ಆಗ್ರಹಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯ ಕಾಂಗ್ರೇಸ್ ಬೆಂಬಲಿಸಿದೆ. 12 ಜನ ಪಂಚಮಸಾಲಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. 12 ಜನರ ಪೈಕಿ ಕೇವಲ ಇಬ್ಬರನ್ನು ಮಂತ್ರಿಯನ್ನಾಗಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ವಿಜಯಾನಂದ ಕಾಶಪ್ಪನವರ ಹಾಗೂ ವಿನಯ ಕುಲಕರ್ಣಿಯವರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
