ರೈತ ಬಂಡಾಯದ ನೆಲ ನವಲಗುಂದದಲ್ಲಿ ಅಂದು ಚುನಾವಣಾ ಕಾವು ಜೋರಾಗಿತ್ತು. ಕೈ ಟಿಕೇಟ್ ಗಾಗಿ ಇಬ್ಬರ ನಡುವೆ ಫೈಟ್ ನಡೆದಿತ್ತು. ತೆನೆ ಇಳಿಸಿ ಕೈ ಹಿಡಿದಿದ್ದ ಎನ್ ಎಚ್ ಕೋನರೆಡ್ಡಿ ವರ್ಸಸ್ ವಿನೋದ ಅಸೂಟಿ ನಡುವೆ ಟಿಕೇಟ್ ಗಾಗಿ ಭಾರಿ ಪೈಪೋಟಿ ನಡೆದಿತ್ತು. ಒಬ್ಬರನ್ನು ಸಮಾಧಾನ ಮಾಡಿ ಮತ್ತೊಬ್ಬರಿಗೆ ಬೆನ್ನು ತಟ್ಟುವ ಕೆಲಸ ಬಹುತೇಕ ಮುಗಿದಿತ್ತು.
ಯಾವಾಗ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಟಿಕೇಟ್ ಎನ್ ಎಚ್ ಕೋನರೆಡ್ಡಿಯವರ ಪಾಲಾಯಿತೋ, ವಿನೋದ ಅಸೂಟಿ ಪಡೆ ಅಕ್ಷರಷ: ಆಕ್ರೋಶ ಹೊರಹಾಕಿತ್ತು. ವಿನೋದ ಅಸೂಟಿ ಬೆಂಬಲಿಗರ ಆಕ್ರೋಶ ತಣ್ಣಗಾಗಿಸಲು ಖುದ್ದು ಕರ್ನಾಟಕದ ಕಾಂಗ್ರೇಸ್ ಉಸ್ತುವಾರಿ ಸುರ್ಜೆವಾಲಾ ಫಿಲ್ಡಿಗೆ ಇಳಿದಿದ್ದರು. ಅಣ್ಣಿಗೇರಿಯಲ್ಲಿ ಸಭೆ ನಡೆಸಿ ಇಬ್ಬರನ್ನು ಒಂದಾಗಿಸುವಲ್ಲಿ ಯಶಸ್ವಿಯಾದರು. ನಂತರ ನಡೆದ ಚುನಾವಣಾ ಪ್ರಚಾರ ಮುಗಿಯುವವರೆಗೂ ಎನ್ ಎಚ್ ಕೋನರೆಡ್ಡಿ ಹಾಗೂ ವಿನೋದ ಅಸೂಟಿ ಇಬ್ಬರು ಜೋಡೆತ್ತುಗಳೆಂದು ಗುರುತಿಸಿಕೊಂಡಿದ್ದರು. ಆದ್ರೆ ಚುನಾವಣೆ ಮುಗಿದು ಫಲಿತಾಂಶ ಬಂದ ನಂತರ ಎನ್ ಎಚ್ ಕೋನರೆಡ್ಡಿ ಶಾಸಕರಾಗಿದ್ದೆ ತಡ ಜೋಡೆತ್ತು, ಒಂಟೆತ್ತು ಆಯಿತು ಎಂದು ವಿನೋದ ಅಸೂಟಿ ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ. 10 ವರ್ಷಗಳ ಕಾಲ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದ ವಿನೋದ ಅಸೂಟಿಯವರನ್ನು ಸೈಡ್ ಲೈನ್ ಮಾಡಲಾಗುತ್ತಿದೆ ಅನ್ನೋ ಆಕ್ರೋಶ ಅವರ ಬೆಂಬಲಗರಲ್ಲಿ ಮನೆ ಮಾಡಿದೆ. ವಿನೋದ ಅಸೂಟಿ ಈಗ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಅನ್ನುವಂತಾಗಿದೆ.