ಧಾರವಾಡ ಜಿಲ್ಲೆಯ ರಾಜಕಾರಣ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸುತ್ತಿದೆ. ಇಬ್ಬರು ಬಿಜೆಪಿಯ ಮಾಜಿ ಶಾಸಕರು ಕಾಂಗ್ರೇಸ್ ಸೇರುತ್ತಾರೆ ಅನ್ನೋ ಸುದ್ದಿ ಬಿಜೆಪಿಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ನವಲಗುಂದ ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಮತ್ತು ಕುಂದಗೋಳ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಕಾಂಗ್ರೇಸ್ ಸೇರುತ್ತಾರೆ ಎನ್ನಲಾಗಿತ್ತು. ಕಾಂಗ್ರೇಸ್ ಸೇರುವದರ ಬಗ್ಗೆ ಕಾಂಗ್ರೇಸ್ ನಾಯಕರು ಸುಳಿವು ಕೊಟ್ಟಿದ್ದರು. ಈ ಬೆಳವಣಿಗೆ ಬಿಜೆಪಿ ವಲಯದಲ್ಲಿ ನಿದ್ದೆಗೆಡಿಸಿತ್ತು.
ಕಾದು ನೋಡುವ ತಂತ್ರದ ಬದಲು, ರಕ್ಷಣಾತ್ಮಕ ಆಟ ಆಡಲು ಫೀಲ್ಡಿಗೆ ಇಳಿದಿರುವ ಬಿಜೆಪಿ ವರಿಷ್ಟರು ಶಂಕರ ಪಾಟೀಲ್ ಮುನೇನಕೊಪ್ಪ ಜೊತೆ ಪ್ರಸ್ತುತ ಬೆಳವಣಿಗೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಸಮಾಧಾನ, ಗುಂಪುಗಾರಿಕೆ, ನಿರ್ಲಕ್ಷ್ಯ, ಮುಂತಾದ ವಿಷಯದ ಬಗ್ಗೆ ಚರ್ಚೆಯಾಗಿದೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಕೊಡವಿಕೊಂಡು ನಿಂತಿರುವ ಕಾಂಗ್ರೇಸ್ ನಾಯಕರು, ಬಿಜೆಪಿ ಹಾಗೂ ಜೆಡಿಎಸ್ ನ ಹಾಲಿ ಹಾಗೂ ಮಾಜಿ ಶಾಸಕರನ್ನು ಸೆಳೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ವಹಿಸಿ ಕೊಡಲಾಗಿದೆ.
ಶೆಟ್ಟರ ಕಟ್ಟಾ ಬೆಂಬಲಿಗರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಶೆಟ್ಟರ ಜೊತೆ ಹೋಗ್ತಾರೆ ಎನ್ನಲಾಗುತ್ತಿತ್ತು. ಆದರೆ ಸಧ್ಯಕ್ಕೆ ಅಂತಹ ಬೆಳವಣಿಗೆ ಇಲ್ಲ ಎನ್ನಲಾಗಿದೆ. ಬಿಜೆಪಿಯಲ್ಲಿಯೇ ಮುಂದುವರೆಯಲು ತೀರ್ಮಾನಿಸಿರುವ ಶಂಕರ ಪಾಟೀಲ್ ಮುನೇನಕೊಪ್ಪ, ಹರಡಿರುವ ಸುದ್ದಿಯಂತೆ ಯಾವದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದಾರೆ. ಆದ್ರೆ ಶಂಕರ ಪಾಟೀಲ್ ಅವರಿಗೆ ಹಿಂದಿನಿಂದಲೂ ಅನೇಕ ಕಾಂಗ್ರೇಸ್ ಮುಖಂಡರೊಂದಿಗೆ ನಿಕಟ ಸಂಪರ್ಕವಿದ್ದು, ಡಿಸೆಂಬರ ವೇಳೆಗೆ ಪಕ್ಕಾ ಚಿತ್ರಣ ಗೊತ್ತಾಗಲಿದೆ.