ಕರ್ನಾಟಕ ಲೋಕಸೇವಾ ಆಯೋಗ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಂತೂ ನೇಮಕಾತಿ ಸಂಬಂಧ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದೆ. ಇದೆಲ್ಲದರ ಮಧ್ಯೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿಯೇ ಅಧಿಕಾರಿಗಳ ಮಧ್ಯೆ ಕಿತ್ತಾಟ ಶುರುವಾಗಿದೆ. ಆಯೋಗದ ಕಾರ್ಯದರ್ಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾರ್ಯದರ್ಶಿಯವರು ಏಕಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವದು ಆಕ್ರೋಶಕ್ಕೆ ಕಾರಣವಾಗಿದೆ. ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ವಿವಿಧ ಸುಧಾರಣಾ ಕ್ರಮಗಳ ಅನುಷ್ಟಾನಕ್ಕೆ 45 ಕೋಟಿಗಳ ಟೆಂಡರ್ ಪ್ರಕ್ರಿಯೆಗೆ ಯಾರ ಅನುಮತಿ ಪಡೆಯದೇ, ಸರ್ಕಾರದ ಗಮನಕ್ಕೆ ತರದೇ ಚಾಲನೆ ನೀಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.
M/s, exergy solution noida delhi ಎಂಬ ಸಂಸ್ಥೆಯವರು 23-8-2023 ರಂದು ಅಧ್ಯಕ್ಷರಿಗೆ ಟೆಂಡರ್ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಿದಾಗಲೇ ಈ ವಿಷಯ ಹೊರ ಬಿದ್ದಿದೆ. ಲೋಕಸೇವಾ ಆಯೋಗದ ಸಭೆಯಲ್ಲಿ ವಿಷಯ ಮಂಡಿಸದೆ, ಸರ್ಕಾರದ ಗಮನಕ್ಕೂ ತರದೇ ಟೆಂಡರ್ ಆಹ್ವಾನಿಸಿರುವ ಕಾರ್ಯದರ್ಶಿಯವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಟೆಂಡರ್ ಕುರಿತು ತನಿಖೆ ನಡೆಸುವಂತೆ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕಾರ್ಯದರ್ಶಿಯವರು ಮಾಡಿದ ಕಾನೂನು ಬಾಹಿರ ಕೆಲಸಗಳ ಪಟ್ಟಿ ಲಗತ್ತಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಟ್ನಲ್ಲಿ ಲೋಕಸೇವಾ ಆಯೋಗ ವಿಶ್ವಾಸ ಕಳೆದುಕೊಳ್ಳುತ್ತಿದ್ದು, ಒಂದರ ಮೇಲೊಂದರಂತೆ ಹಗರಣಗಳು ಬಯಲಾಗುತ್ತಿವೆ.