ಇಸ್ರೋ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿರುವುದನ್ನು ಇಡೀ ವಿಶ್ವವೇ ಸಂಭ್ರಮಿಸಿದೆ. ಬಾಹ್ಯಾಕಾಶ ಮತ್ತು ಖಗೋಳಶಾಸ್ತ್ರದಲ್ಲಿನ ಸಾಧನೆಗೆ ಇಸ್ರೋ ವಿಶ್ವದೆತ್ತರಕ್ಕೆ ಹೆಸರು ಮಾಡಿದೆ. ಮಕ್ಕಳಿಗೆ ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನದಲ್ಲಿ ಜ್ಞಾನ ನೀಡಲು ಸ್ಪೇಸ್ ಇ ಸ್ಕಾಲರ್, ಹಿಮಾಲಯನ್ ಸ್ಪೇಸ್ ಸೆಂಟರ್ ಮಹತ್ವದ ಹೆಜ್ಜೆ ಇಟ್ಟಿದೆ.
ಸರ್ಕಾರಿ ಶಾಲೆಗಳಲ್ಲಿ ಮಾಹಿತಿ ನೀಡುವ ಕರ್ನಾಟಕದ ಮೊದಲ ಬಾಹ್ಯಾಕಾಶ ಮತ್ತು ಖಗೋಳವಿಜ್ಞಾನ ಪ್ರಯೋಗಾಲಯ ಧಾರವಾಡದ ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆರಂಭಗೊಂಡಿದೆ. 2ನೇ ಮತ್ತು 3ನೇ ಬಾಹ್ಯಾಕಾಶ ಪ್ರಯೋಗಾಲಯಗಳು ಹುಬ್ಬಳ್ಳಿಯ ಕಿರೇಸೂರು ಸರಕಾರಿ ಪ್ರೌಢಶಾಲೆ ಹಾಗೂ ಧಾರವಾಡದ ಸರಕಾರಿ ಪ್ರೌಢಶಾಲೆ ಆರ್.ಎನ್.ಶೆಟ್ಟಿ ಕ್ರೀಡಾಂಗಣ ಆವರಣದಲ್ಲಿ ಮುಂದಿನ ವಾರಗಳಲ್ಲಿ ಉದ್ಘಾಟನೆಗೊಳ್ಳಲಿವೆ.
ಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಪರಿಣಿತಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಾಲಯ ತೆರೆಯಲು ಜಿಲ್ಲಾ ಶಿಕ್ಷಣ ಇಲಾಖೆ ಒಡಂಬಡಿಕೆಗೆ ಸಹಿ ಹಾಕಿದೆ.
