ಹಿಂದೂ ಧರ್ಮದ ಕುರಿತು ನಡೆಯುತ್ತಿರುವ ವಾಕ್ಸಮರ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಗೃಹ ಸಚಿವ ಜಿ ಪರಮೇಶ್ವರ ಹಿಂದೂ ಧರ್ಮದ ವಿಚಾರವಾಗಿ ನೀಡಿದ್ದಾರೆ ಎನ್ನಲಾದ ಆ ಒಂದು ಹೇಳಿಕೆ ರಾಜ್ಯದಲ್ಲಿ ಸನಾತನ ಸುನಾಮಿ ಎಬ್ಬಿಸಿದೆ. ಪರಮೇಶ್ವರ ಅವರಿಗೆ ” ವೇದ ಓದಲಿ ” ಎಂದು ಸಲಹೆ ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಯೊಬ್ಬರು ತಿರುಗೇಟು ಕೊಟ್ಟಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿರುವ ಬಿ ಕೆ ಎಸ್ ವರ್ಧನ, ತಾವು ದಲಿತ ಅನ್ನೋ ಕಾರಣಕ್ಕೆ ಬಿಜೆಪಿ ಸರ್ಕಾರದಲ್ಲಿ ಅನುಭವಿಸಿದ ಯಾತನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೊಮ್ಮಾಯಿಯವರ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ ಮಾಡಿರುವ ಹಿರಿಯ ಅಧಿಕಾರಿ ವರ್ಧನ, ನಿಮಗಿಂತ, ಪರಮೇಶ್ವರ ಅವರು ತತ್ವ ಶಾಸ್ತ್ರ, ರಾಜಕೀಯ, ವಿಜ್ಞಾನ, ಚರಿತ್ರೆ, ಮನುಧರ್ಮ ಶಾಸ್ತ್ರ ವಿಷಯದಲ್ಲಿ ಹೆಚ್ಚು ಜ್ಞಾನ ಹೊಂದಿದ್ದಾರೆ. ಅವರಿಗೆ ಬೊಮ್ಮಾಯಿಯವರು ವೇದ ಓದುವಂತೆ ಪುಕ್ಕಟೆ ಸಲಹೆ ನೀಡಿದ್ದಾರೆ. ಪರಮೇಶ್ವರ ಅವರ ಕುರಿತು, ಅವರ ಮಾತಿನ ಮರ್ಮ ಕುರಿತು ತಿಳಿದುಕೊಳ್ಳಬೇಕಾದರೆ ” ನೀವು ಒಮ್ಮೆ ಹೊಲೆಯರಾಗಿ ಹುಟ್ಟಿದರೆ, ನಿಮ್ಮ ವೇದಗಳು ಮಾಡಿದ ಮಸಲತ್ತು ನಿಮ್ಮ ಅನುಭವಕ್ಕೆ ಬರುತ್ತದೆ ಎಂದು ವರ್ಧನ ಕಿಡಿಕಾರಿದ್ದಾರೆ.
ಲಿಂಗಾಯತ ಧರ್ಮ ಸ್ಥಾಪಿಸಿರುವ ಜಗಜ್ಯೋತಿ ಬಸವೇಶ್ವರರೇ, ” ಜನಿವಾರ ಕಳಚಿ, ವೇದಕ್ಕೆ ಒರೆಯನಿಕ್ಕುವೆ ” ಎಂದು ವರ್ಣಾಶ್ರಮದ ಬೀಜಗಳಿರುವ ವೇದಗಳನ್ನು ನಿರಾಕರಿಸಿದ ಚರಿತ್ರೆ ಓದಿ, ತಿಳುವಳಿಕೆಯ ಆಳ, ವಿಸ್ತಾರ ಮಾಡಿಕೊಂಡಿದ್ದರೆ, ಗೃಹ ಸಚಿವ ಪರಮೇಶ್ವರ ಅವರಿಗೆ ವೇದ ಓದುವ ಪುಕ್ಕಟೆ ಸಲಹೆ ನೀಡುತ್ತಿರಲಿಲ್ಲ ಎಂದಿದ್ದಾರೆ.
ರಾಜ್ಯಾಧಿಕಾರವನ್ನು ದುರಪಯೋಗ ಪಡಿಸಿಕೊಂಡು ನೀವು, ನನ್ನಂತ ಒಬ್ಬ ರಾಜ್ಯ ಮಟ್ಟದ ಅಧಿಕಾರಿಯ ಮೇಲೆ ದೌರ್ಜನ್ಯ ನಡೆಸಿದಿರಿ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ನಿಮಗೆ ದಮ್ ಇದ್ದರೆ, ತಾಕತ್ತ ಇದ್ದರೆ ನೈತಿಕವಾಗಿ ನನ್ನ ಅಭಿಪ್ರಾಯ ಖಂಡಿಸಬಹುದು. ಅಪಮಾನ ಆಗಿದ್ದರೆ ಈಗಿರುವ ಸರ್ಕಾರದ ನಿಮ್ಮ ಜಾತಿವಾದಿ ಮಿತ್ರರಿಂದ ಮತ್ತೊಮ್ಮೆ ದೌರ್ಜನ್ಯ ಎಸಗಬಹುದು ಎಂದು ಬಿ ಕೆ ಎಸ್ ವರ್ಧನ್ ಸವಾಲು ಹಾಕಿದ್ದಾರೆ.
