ಭಾರತದ ಬೀದಿಗಳಲ್ಲಿ ಕಂಡು ಬರುತ್ತಿದ್ದ ಬೀದಿ ನಾಯಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೇಂದ್ರ ಸರ್ಕಾರದ ಪಶು ಸಂಗೋಪನೆ ಇಲಾಖೆ ಬೀದಿ ನಾಯಿಗಳ ಕುರಿತಂತೆ ಅಂಕಿ ಅಂಶಗಳನ್ನು ಪ್ರಕಟಿಸಿದೆ. ಭಾರತದ ಬೀದಿಗಳಲ್ಲಿ 2012 ರಲ್ಲಿ ಇದ್ದ ನಾಯಿಗಳ ಸಂಖ್ಯೆ 1.71 ಕೋಟಿಯಿಂದ 2019 ರ ವರೆಗೆ 1.53 ಕೋಟಿಗೆ ಇಳಿದಿದೆ. 2012 ರಿಂದ 2019 ರ ನಡುವೆ ದೇಶಾದ್ಯಂತ ಬೀದಿಗಳಲ್ಲಿ ನಾಯಿಗಳ ಸಂಖ್ಯೆಯಲ್ಲಿ ಶೇಕಡಾ 10% ರಷ್ಟು ಇಳಿಕೆಯಾಗಿದೆ.
ಉತ್ತರ ಪ್ರದೇಶದಲ್ಲಿ 2012 ರಿಂದ 2019 ರ ನಡುವೆ 21 ಲಕ್ಷ ಬೀದಿ ನಾಯಿಗಳು ಕಡಿಮೆಯಾಗಿವೆ. ಉತ್ತರ ಪ್ರದೇಶದ ಬೀದಿಗಳಲ್ಲಿ ನಾಯಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದಲ್ಲಿನ ಬೀದಿ ನಾಯಿಗಳ ಸಂಖ್ಯೆಯಲ್ಲಿ ಅರ್ಧದಷ್ಟು ಕಡಿಮೆಯಾಗಿದೆ. ಉತ್ತರ ಪ್ರದೇಶದಲ್ಲಿ 2012 ರಲ್ಲಿ 41.79 ಲಕ್ಷ ಬೀದಿ ನಾಯಿಗಳು ಇದ್ದವು. 2019 ರಲ್ಲಿ ಬೀದಿ ನಾಯಿಗಳ ಸಂಖ್ಯೆ 20.59 ಲಕ್ಷಕ್ಕೆ ಇಳಿಕೆಯಾಗಿದೆ.
ಉತ್ತರ ಪ್ರದೇಶದ ನಂತರ, ಆಂಧ್ರಪ್ರದೇಶದಲ್ಲಿ (ತೆಲಂಗಾಣ ಸೇರಿದಂತೆ) ಬೀದಿ ನಾಯಿಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಇಳಿಮುಖವಾಗಿದೆ. 3.7 ಲಕ್ಷ ನಾಯಿಗಳು ಕಡಿಮೆಯಾಗಿವೆ. 2012 ರಲ್ಲಿ 12.3 ಲಕ್ಷದಷ್ಟಿದ್ದ ಬೀದಿ ನಾಯಿಗಳು 2019 ರಲ್ಲಿ 8.6 ಲಕ್ಷಕ್ಕೆ ಇಳಿಮುಖವಾಗಿದೆ. ಬಿಹಾರದಲ್ಲಿ 3.4 ಲಕ್ಷ, ಅಸ್ಸಾಂ 3 ಲಕ್ಷ, ತಮಿಳುನಾಡಿನಲ್ಲಿ 2 ಲಕ್ಷ, ಮಧ್ಯಪ್ರದೇಶದಲ್ಲಿ 2 ಲಕ್ಷ, ಜಾರ್ಖಂಡ್ ನಲ್ಲಿ 98,000, ಮತ್ತು ಪಶ್ಚಿಮ ಬಂಗಾಳನಲ್ಲಿ 17 ಲಕ್ಷ ಬೀದಿ ನಾಯಿಗಳು ಕಡಿಮೆಯಾಗಿವೆ.
ವಿಪರ್ಯಾಸವೆಂದರೆ, ಕರ್ನಾಟಕದ ಬೀದಿಗಳಲ್ಲಿ ನಾಯಿಗಳ ಸಂಖ್ಯೆಯಲ್ಲಿ ಶೇಕಡಾ 10 ರಷ್ಟು ಹೆಚ್ಚಳವಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2019 ರ ಸಮೀಕ್ಷೆ ಪ್ರಕಾರ 3 ಲಕ್ಷ ಬೀದಿ ನಾಯಿಗಳಿವೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಪ್ರಾಣಿಗಳ ಜನನ ನಿಯಂತ್ರಣ ಯೋಜನೆ ಅನುಷ್ಟಾನಗೊಳಿಸಿದೆ.