ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಜೊತೆ ಶಾಮೀಲಾಗಿ ಹಣ ಪಡೆದಿದ್ದ ಹಾಲಶ್ರೀಯನ್ನು ಇಂದು ಹಿರೇಹಡಗಲಿಯ ಶಿವಯೋಗಿ ಹಾಲಸ್ವಾಮಿಗಳ ಮಹಾಸಂಸ್ಥಾನ ಮಠಕ್ಕೆ ಕರೆತರಲಾಯಿತು. ಜಾಕೆಟ್ ಹಾಕಿಕೊಂಡು ಮುಖಕ್ಕೆ ಮಾಸ್ಕ್ ಹಾಕಿದ್ದ ಹಾಲಶ್ರೀಯನ್ನು ಸಿ ಸಿ ಬಿ ಪೊಲೀಸರು ಕೊರಳಪಟ್ಟಿ ಹಿಡಿದು ಮಠದ ಒಳಗೆ ಕರೆದೋಯ್ದರು. ನೋಟು ಎಣಿಸುವ ಮಷಿನ್ ಜೊತೆ ಆಗಮಿಸಿದ ಸಿ ಸಿ ಬಿ ಟೀಮ್, ಇನ್ಸಪೆಕ್ಟರ ಚಂದ್ರಪ್ಪ ಬಾರ್ಕಿ ನೇತ್ರತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಯಿತು.
ವಂಚನೆ ಪ್ರಕರಣದಲ್ಲಿ A3 ಆರೋಪಿಯಾಗಿರುವ ಹಾಲಶ್ರೀಯನ್ನು ನಿನ್ನೇ ಓಡಿಸ್ಸಾದಲ್ಲಿ ಬಂಧಿಸಲಾಗಿತ್ತು. ಹಾಲಶ್ರೀ, ಮಠಕ್ಕೆ ಬರುತ್ತಿದ್ದಂತೆ ಪರ್ಯಾಯ ಸ್ವಾಮೀಜಿ ಈಡುಗಾಯಿ ಒಡೆದು ಹಾಲಶ್ರೀಯವರಿಗೆ ಸ್ವಾಗತಿಸಿದರು. ಸಿ ಸಿ ಬಿ ಅಧಿಕಾರಿಗಳು ಮಠದಲ್ಲಿ ಇದ್ದ 56 ಲಕ್ಷ 3 ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆದರು. ಹಾಲಶ್ರೀ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನ ಜಮಾಯಿಸಿದ್ದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಈಗಾಗಲೇ ಸಿ ಸಿ ಬಿ ಕಸ್ಟಡಿಯಲ್ಲಿದ್ದು, ಇದೀಗ ಹಾಲಶ್ರೀ ಬಂಧನವಾಗಿದೆ. ಪ್ರಕರಣ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಹಾಲಶ್ರೀಯನ್ನು ಮಠಕ್ಕೆ ಕರೆತರುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬಿಗಿ ಪೊಲೀಸ್ ಬಂದೂಬಸ್ತ ಮಾಡಿದ್ದರು.