ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿ ಹಾಗೂ ಸಿಬ್ಬಂದಿಯೊಬ್ಬರ ನಡುವೆ ಮಾರಾಮಾರಿ ನಡೆದು ಇದೀಗ ಇಬ್ಬರೂ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮೋಹನ ಬಡಿಗೇರ ಎಂಬ ಜೈಲು ಸಿಬ್ಬಂದಿ ಹಾಗೂ ಪ್ರಶಾಂತ್ ಅಲಿಯಾಸ್ ಪಾಚು ಎಂಬ ಕೈದಿ ನಡುವೆಯೇ ಈ ಮಾರಾಮಾರಿ ನಡೆದಿದೆ. ಪ್ರಶಾಂತ ಎಂಬ ಕೈದಿ ಅನೇಕ ದಿನಗಳಿಂದ ಧಾರವಾಡದ ಕೇಂದ್ರ ಕಾರಾಗೃಹದಲ್ಲಿಯೇ ಸೆರೆವಾಸ ಅನುಭವಿಸುತ್ತಿದ್ದಾನೆ. ಇಂದು ಕ್ಷುಲ್ಲಕ ಕಾರಣಕ್ಕಾಗಿ ಕೈದಿ ಹಾಗೂ ಸಿಬ್ಬಂದಿ ಮಧ್ಯೆ ಮಾರಾಮಾರಿ ನಡೆದಿದೆ.
ಪ್ರಶಾಂತ ಎಂಬ ಕೈದಿ ಬಾಚಣಿಕೆಯನ್ನೇ ಚಾಕುವಿನಂತೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಕೈಕೈ ಮಿಲಾಯಿಸಿದ್ದರಿಂದ ಇಬ್ಬರಿಗೂ ಗಾಯಗಳಾಗಿವೆ. ಸದ್ಯ ಇಬ್ಬರನ್ನೂ ಧಾರವಾಡದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.