ಹಿಂದೂ ಮುಸ್ಲೀಂ ಭಾವೈಕ್ಯದ ಹರಿಕಾರ ಸಂತ ಶಿಶುನಾಳ ಶರೀಫರು ಬತ್ತಿ ಸೇದಲು ಗುಡಗೇರಿ ದ್ಯಾಮವ್ವ ದೇವಿಯ ನತ್ತನ್ನು ಪಡೆದಿದ್ದರು. ಶ್ರೀದೇವಿಯ ಸಾಕ್ಷಾತ್ಕಾರವನ್ನು ಕಣ್ಣಾರೆ ಕಂಡು ಭಕ್ತಿ ಪರವಶರಾದವರಿಗೆ ಪುಣ್ಯ ತಾಣವಾಗಿರುವ ತಾಲೂಕಿನ ಗುಡಗೇರಿ ಗ್ರಾಮದೇವತೆಯ ದರ್ಶನಕ್ಕೆ ಇಂದು ಮತ್ತು ನಾಳೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.
ಕಳಸದ ಗುರು ಗೋವಿಂದ ಭಟ್ಟರು ಹಾಗೂ ಸಂತ ಶಿಶುವಿನಹಾಳ ಶರೀಫ ಸಾಹೇಬರು ಜತೆಯಾಗಿಯೇ ಬಂದು ತಮ್ಮ ಐತಿಹ್ಯ ತೋರಿದ ಇಲ್ಲಿ ಪ್ರತಿ ವರ್ಷ ನಡೆಯುವ ದಸರಾ ಉತ್ಸವ, ಮೈಸೂರ ದಸರಾ ನೆನಪಿಸುತ್ತದೆ. ಪೂರ್ವಾಭಿಮುಖವಾಗಿ ಸಿಂಹದ ಮೇಲೆ ವಿರಾಜಮಾನಳಾಗಿರುವ ದ್ಯಾಮವ್ವ ದೇವಿಯ ರೂಪವನ್ನು ನೋಡುವುದು ಭಕ್ತರಿಗೆ ಎಲ್ಲಿಲ್ಲದ ಖುಷಿ. ಕಟ್ಟಿಗೆಯ ಕೆತ್ತನೆಯಿಂದ ವಿಶಿಷ್ಟ ರೀತಿಯಲ್ಲಿ ರೂಪುಗೊಂಡ ಈ ದೇವಿಯ ಹಿಂಬದಿಯಲ್ಲಿ ವಿಶಿಷ್ಟ ರೀತಿಯ ಅಲಂಕಾರ ಮಾಡಲಾಗುತ್ತದೆ.
ನವರಾತ್ರಿ ಉತ್ಸವದಲ್ಲಿ ಗ್ರಾಮದ ಜನತೆ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣ-ಬಣ್ಣ ಹಚ್ಚಿ ಅಲಂಕಾರಗೊಳಿಸಿ 9 ದಿನಗಳ ಕಾಲ ಉಪವಾಸ ವ್ರತ ಮಾಡಿ ರಾತ್ರಿ ದೇವಿಯ ಪಲ್ಲಕ್ಕಿ ಉತ್ಸವವು ದೇವಿಯ ಸಹೋದರಿಯಾದ ದುರ್ಗಾದೇವಿ ದೇವಸ್ಥಾನದವರೆಗೆ ತೆರಳಿ ಪುನಃ ಗುಡಿಗೆ ಬಂದ ನಂತರ ಭಕ್ತರು ಉಪವಾಸ ಮುಕ್ತಾಯ ಮಾಡುತ್ತಾರೆ. ಈ ರೀತಿ ಉಪವಾಸ ಮಾಡುವುದರೊಂದಿಗೆ ದೇವಿಗೆ ತಮ್ಮ ಹರಕೆ ಸಲ್ಲಿಸುತ್ತಾರೆ.9 ದಿನಗಳ ಕಾಲ ಗ್ರಾಮದ ಜನತೆ ಕುಟ್ಟುವುದು, ಬೀಸುವುದು, ರೊಟ್ಟಿ ಮಾಡುವುದಿಲ್ಲ.ಮಡಿಯಿಂದ ದೇವಿಯ ಸೇವೆ ಮಾಡುತ್ತಾರೆ.
ನವರಾತ್ರಿ ಅಂಗವಾಗಿ ಗುಡಿಗೆ ವಿಶಿಷ್ಟ ರೀತಿಯ ಮೈಸೂರು ಮಾದರಿಯ ದೀಪಾಲಂಕಾರ ಮಾಡಲಾಗುತ್ತದೆ. ಬಂಗಾರದ ಆಭರಣಗಳನ್ನು 9 ದಿನಗಳ ಕಾಲ ದೇವಿಗೆ ವಿಶಿಷ್ಟ ರೀತಿಯಿಂದ ಅಲಂಕರಿಸುತ್ತಾರೆ.
ವಿಜಯ ದಶಮಿಯಂದು ಗ್ರಾಮದ ಎಲ್ಲ ಗುಡಿಯ ಪಲ್ಲಕ್ಕಿಗಳು ಸೇರಿ ಗ್ರಾಮದೇವಿ ಗುಡಿ ಬಳಿ ಬಂದು ಅಲ್ಲಿಂದ ಲಕ್ಷ್ಮೇಶ್ವರ ರಸ್ತೆಯಲ್ಲಿರುವ ದ್ಯಾಮವ್ವ ದೇವಿ ಪಾದಗಟ್ಟಿಯ ವರೆಗೆ ಸಕಲ ವಾದ್ಯ-ವೈಭವದೊಂದಿಗೆ ಎಲ್ಲ ಪಲ್ಲಕ್ಕಿಗಳು ತೆರಳಿ ಬನ್ನಿಯ ಗಿಡಕ್ಕೆ ಗ್ರಾಮದ ಪೋಲಿಸಗೌಡ್ರ ಮನೆತನದವರು ಪೂಜೆ ಸಲ್ಲಿಸುವರು. ನಂತರ ದೇವಿಯ ಖಡ್ಗದಿಂದ ಬನ್ನಿ ಮುಡಿಯುತ್ತಾರೆ. ನಂತರ ಜನರೆಲ್ಲ ಬನ್ನಿ ವಿನಿಮಯ ಮಾಡುತ್ತಾರೆ.