ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬಡವರಿಗೆ ಸೂರು ಕಲ್ಪಿಸಲು 2015ರಲ್ಲಿ ರೂಪಿಸಿದ ಯೋಜನೆಯಡಿ ತಲಾ ರೂ.7.50 ಲಕ್ಷ ವೆಚ್ಚದಲ್ಲಿ ಮನೆಗಳ ಸಮುಚ್ಚಯಯವನ್ನು ಫಲಾನುಭವಿಗಳಿಗೆ ನಿರ್ಮಿಸಿಕೊಡುವುದು ಸರ್ಕಾರದ ಕಾರ್ಯಕ್ರಮವಾಗಿತ್ತು. ಈ ಯೋಜನೆಯನ್ವಯ ಸರ್ಕಾರ 3 ಲಕ್ಷ ರೂ. ಸಬ್ಸಿಡಿ ನೀಡಲಿದ್ದು, ಉಳಿದ ಹಣವನ್ನು ಫಲಾನುಭವಿ ಪಾವತಿಸಬೇಕಾಗಿತ್ತು. ಆದರೆ ಅವರಿಗೆ ಬ್ಯಾಂಕ್ ಸಾಲ ಲಭ್ಯವಾಗದೆ ಇದ್ದುದ್ದರಿಂದ ಅವರ ಪಾಲಿನ ಹಣ ಗುತ್ತಿಗೆದಾರರ ಕೈಸೇರದೆ 2.32 ಲಕ್ಷ ಮನೆಗಳ ಅರ್ಧಂಬರ್ಧ ನಿರ್ಮಾಣವಾಗಿ ನಿಂತಿದ್ದವು.
ಈ ಮನೆಗಳ ಬಾಕಿ ಹಣವನ್ನು ಸರ್ಕಾರವೇ ಪಾವತಿಸಿ, ಅರ್ಹಕುಟುಂಬಗಳಿಗೆ ಉಚಿತವಾಗಿ ಸೂರು ಒದಗಿಸಲಿದೆ ಎಂದು ವಸತಿ ಸಚಿವ ಬಿ ಝಡ್ ಜಮೀರ ಅಹ್ಮದ ಖಾನ ತಿಳಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ಸಹ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.