ಕಡೆಗೂ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕವಾಗಿದೆ. ಶಿಕಾರಿಪುರದ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರರಿಗೆ ಬಿಜೆಪಿ ಅಧ್ಯಕ್ಷ ಸ್ಥಾನ ಒಲಿದಿದೆ. ಲೋಕಸಮರಕ್ಕೆ ಸಜ್ಜಾಗಬೇಕಿರುವ ಹಿನ್ನೆಲೆಯಲ್ಲಿ, ಬಿಜೆಪಿ ಹೈಕಮಾಂಡ ಲಿಂಗಾಯತ ನಾಯಕತ್ವಕ್ಕೆ ಮಣೆ ಹಾಕಿದೆ.
ಕಳೆದ ನಾಲ್ಕು ತಿಂಗಳಿಂದ ಕಗ್ಗಂಟಾಗಿದ್ದ ಹೊಸ ಅಧ್ಯಕ್ಷರ ನೇಮಕಾತಿ ಸುಖಾಂತ್ಯ ಕಂಡಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ ನೇಮಕದ ಆದೇಶ ಹೊರಡಿಸಿದ್ದು, ಈ ಆದೇಶ ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಜಾ ಹುಲಿ ಯಡಿಯೂರಪ್ಪನವರ ಪುತ್ರನಿಗೆ ಪಟ್ಟ ಕಟ್ಟುವ ಮೂಲಕ ಬಿಜೆಪಿ ಹೈಕಮಾಂಡ ನಾಯಕರು ಲಿಂಗಾಯತ ಸಮುದಾಯಕ್ಕೆ ಶಕ್ತಿ ತುಂಬಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇನ್ನೇನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೇ ಬಿಟ್ಟರು ಅನ್ನುವಷ್ಟರ ಮಟ್ಟಿಗೆ ಹೆಸರು ಮುಂಚೂಣಿಯಲ್ಲಿತ್ತು. ವಿಜಯೇಂದ್ರ ನೇಮಕದಿಂದ ಅವರ ನಡೆ ಏನಾಗುತ್ತದೆ ಅನ್ನೋದು ಕುತೂಹಲ ಮೂಡಿಸಿದೆ. ಬಿಜೆಪಿ ನಾಯಕರು ಲಿಂಗಾಯತರಿಗೆ ಪಕ್ಷದ ಅಧ್ಯಕ್ಷ ಪಟ್ಟ ಕಟ್ಟಿದ್ದು, ವಿರೋದ ಪಕ್ಷದ ನಾಯಕನ ಸ್ಥಾನಕ್ಕೆ ಸುನೀಲ್ ಕುಮಾರ ಅಥವಾ ಆರ್ ಅಶೋಕರನ್ನು ನೇಮಕ ಮಾಡುವ ಸಂಭವವಿದೆ ಎಂದು ಹೇಳಲಾಗಿದೆ