ಹೇಳಲು ಹೊರಟಿದ್ದು ಧಾರವಾಡ ಟು ನವಲಗುಂದ ರಸ್ತೆಯ ಕಥೆ. ಧಾರವಾಡದಿಂದ ಹೆಬಸೂರು ರಾಜ್ಯ ಹೆದ್ದಾರಿ 52 ರ ರಸ್ತೆಯ ರೋಚಕ ಕಥೆ ಇದು. ಅಪ್ಪಿ ತಪ್ಪಿ ಈ ರಸ್ತೆಯಲ್ಲಿ ಬಾಣಂತಿಯರು ಸಂಚರಿಸಿದರೆ ನಾರ್ಮಲ್ ಡಿಲೆವರಿ ಗ್ಯಾರೆಂಟಿ. ಅಷ್ಟರ ಮಟ್ಟಿಗೆ ಈ ರಸ್ತೆ ಕೆಟ್ಟು ಹೋಗಿದೆ.
ನವಲಗುಂದದಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಇದೀಗ ಅನಾಥವಾಗಿದೆ. ಹಾಗೆಂದ ಮಾತ್ರಕ್ಕೆ ಈ ರಸ್ತೆ ಕಾಮಗಾರಿ ನಡೆದಿಲ್ಲ ಅಂತಿಲ್ಲ. ಆದರೆ ಅದು ಕೇವಲ ಹಾಳೆಯ ಮೇಲೆ. ರಸ್ತೆ ಕಾಮಗಾರಿ ಮಾಡಿದ್ದೇವೆಂದು ಹೇಳಿ ಕಳೆದ 5 ವರ್ಷಗಳಿಂದ ಮೂರು ಕೋಟಿ ದುಡ್ಡು ಕೊಳ್ಳೆ ಹೊಡೆದಿದ್ದಾರೆ. ಲೋಕೋಪಯೋಗಿ ಕೋಟಿ ಅಧಿಕಾರಿಗಳು ಈ ರಸ್ತೆ ಹೆಸರಲ್ಲಿ ಕೋಟಿ ತಿಂದು ತೇಗಿದ್ದಾರೆ. ಇಷ್ಟಾದರು ಈ ರಸ್ತೆ 5 ವರ್ಷಗಳಿಂದ ಇದ್ದ ಪರಿಸ್ಥಿತಿಯಲ್ಲಿಯೇ ಇದೆ. ಅದೇ ತೆಗ್ಗುಗಳು, ಕಿತ್ತೋದ ಡಾಂಬರ ಕಂಡು ಬರುತ್ತದೆ.
ಸಧ್ಯ ಇದು ಅನಾಥ ರಸ್ತೆಯಾಗಿದೆ. ಇದಕ್ಕೆ ಅಪ್ಪನು ಇಲ್ಲ ಅಮ್ಮನು ಇಲ್ಲ, ಕೇಳುವವರೇ ಇಲ್ಲದಾಗಿದೆ. ಶಾಸಕರಾದವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ರಸ್ತೆಯಲ್ಲಿ ನಿಲ್ಲುವುದಿಲ್ಲ. ನವಲಗುಂದಕ್ಕೆ ಹೋಗಬೇಕಾದರೆ ಹುಬ್ಬಳ್ಳಿ ಮೂಲಕ ಹೋಗುತ್ತಾರೆ.
ಹದಗೆಟ್ಟ ಈ ರಸ್ತೆಯ ರಿಪೇರಿ ಮಾಡಿ ಬ್ಯಾಹಟ್ಟಿಯಲ್ಲಿ ಜಿಲ್ಲಾ ಪಂಚಾಯತಿಯ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಹದಿನೈದು ದಿನಗಳ ಕಾಲ ಪ್ರತಿಭಟನೆ ನಡೆಯಿತು. ಆದರೂ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನಲಿಲ್ಲ. ಲೋಕೋಪಯೋಗಿ ಇಲಾಖೆಯ ನಾಲ್ಕು ಜನ ಅಧಿಕಾರ ಇಂಜಿನಿಯರ ಬದಲಾದರು ಸಹ ಅವರೆಲ್ಲ, ಈ ರಸ್ತೆಯ ಕಾಮಗಾರಿ ಹೆಸರಲ್ಲಿ ದುಡ್ಡು ಮಾಡಿಕೊಂಡರು ಹೊರತಾಗಿ ರಸ್ತೆ ರಿಪೇರಿ ಮಾಡಲೇ ಇಲ್ಲ. ಕಾಮಗಾರಿ ನೆಪದಲ್ಲಿ ಧಾರವಾಡದಿಂದ ಹೆಬಸೂರು 33 ಕಿಲೋಮೀಟರ್ ರಸ್ತೆಗೆ 3 ಕೋಟಿ ದುಡ್ಡು ಕೊಳ್ಳೆಹೊಡೆಯಲಾಗಿದೆ. ಸರ್ಕಾರ ಬದಲಾದರು ಈ ರಸ್ತೆ ಮಾತ್ರ ಬದಲಾವಣೆ ಕಾಣದಿರುವುದು ದೊಡ್ಡ ದುರಂತ.