ಮದುವೆ ಆಗುವ ಸಮಯದಲ್ಲಿ ಮದುಮಗಳು ದೇಶದ ಪ್ರಧಾನಿ ಯಾರು..? ಎಂದು ಪ್ರಶ್ನೆ ಮಾಡಿದ್ದಾಳೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಹೇಳಲು ವಿಫಲ ಆಗಿದ್ದರಿಂದ ಆಕೆ ಮದುವೆ ಆಗುವುದಕ್ಕೆ ನಿರಾಕರಿಸಿರುವ ಘಟನೆ ವೈರಲ್ ಆಗಿದೆ. ಗಾಜಿಯಾಬಾದ್ನಲ್ಲಿ ಈ ರೀತಿಯ ಘಟನೆಯೊಂದು ನಡೆದಿದೆ. ಈ ವೇಳೆ ನರೇಂದ್ರ ಮೋದಿ ಹೆಸರನ್ನು ಹೇಳಿದ ಮದುವೆ ಗಂಡಿನ ಸಹೋದರನ ಜೊತೆಗೆ ಆಕೆ ಮದುವೆ ಆಗಿರುವ ಅಚ್ಚರಿಯ ಘಟನೆ ನಡೆದಿದೆ.
ಸೈದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಸಿರ್ಪುರ ಗ್ರಾಮದ 27 ವರ್ಷದ ಯುವಕ ಶಿವಶಂಕರ್ ಎಂಬಾತನ ಮದುವೆ ನಿಶ್ಚಯ ಆಗಿತ್ತು. ಕರಂಡ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಪಟ್ಟಿ ಗ್ರಾಮದ ರಂಜನಾ ಎಂಬಾಕೆ ಜೊತೆಗೆ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮದುವೆ ನಿಶ್ಚಯ ಆಗಿದ್ದರಿಂದ ಹುಡುಗನ ಮನೆಯವರು ಹುಡುಗಿ ಊರಿಗೆ ಬಂದಿದ್ದರು. ಅಂದು ಎಲ್ಲರೂ ಒಟ್ಟಿಗೆ ಕುಳಿತು ಹರಟೆ ಹೊಡೆಯುವಾಗ ಹುಡುಗ ಶಿವಶಂಕರ್ ಹುಡುಗಿಯನ್ನು ಒಂದೆರಡು ಪ್ರಶ್ನೆ ಕೇಳಿದ್ದನು. ಪ್ರತಿಯಾಗಿ ಹುಡುಗಿ ದೇಶದ ಪ್ರಧಾನ ಮಂತ್ರಿ ಯಾರು ಎಂದು ಪ್ರಶ್ನಿಸಿದ್ದು, ಮದುವೆ ಮುರಿದು ಬೀಳುವುದಕ್ಕೆ ಕಾರಣ ಆಗಿದೆ ಎನ್ನಲಾಗಿದೆ.
ಮದುವೆ ಗಂಡು ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಹೇಳಲು ಸಾಧ್ಯವಾಗದ ಕಾರಣ ಹುಡುಗಿ ಮನೆಯವರು ಹಿಯ್ಯಾಳಿಸಿದರು. ವರನು ಬುದ್ಧಿವಂತನಲ್ಲ, ಪ್ರಧಾನಿ ಹೆಸರೇ ಗೊತ್ತಿಲ್ಲ ಎಂದು ಹಿಯ್ಯಾಳಿಸಿದ್ದರಿಂದ ಅವಮಾನಕ್ಕೆ ಒಳಗಾದ ರಂಜನಾ, ನಾನು ಈತನನ್ನು ಮದುವೆ ಆಗುವುದಿಲ್ಲ ಎಂದು ಹಠ ಹಿಡಿದಳು. ಅಷ್ಟೇ ಅಲ್ಲದೆ ಶಿವಶಂಕರ್ ಸಹೋದರ ಅನಂತನನ್ನು ಮದುವೆಯಾಗಿದ್ದಾಳೆ. ಈ ಸುದ್ದಿ ಇದೀಗ ವೈರಲ್ ಆಗಿದೆ.
