ದೋಸ್ತ ಯಾಕೊ ಇತ್ತಿತ್ತಲಾಗಿ ತಿಂದದ್ದು ಉಂಡದ್ದು ರುಚಿನ ಹತ್ ವಲ್ತು…ಹಸಿವು ಆಗವಲ್ತು ಮಾರಾಯಾ ಮೊದಲ್ ಆಗಿದ್ರ ಐದಾರು ರೊಟ್ಟಿ ಇಷ್ಟುಕನ್ ಅನ್ನ ಉಣ್ಣತಿದ್ನಿ ಅಂತ ಗೆಳೆಯ ನಾಗೇಶ್ ಹೇಳತೊಡಗಿದ್ದ. ಹಂಗಾದ್ರ ಬಾ ದೋಸ್ತ ಇಲ್ಲೆ ಒಂದು ಘರಗುತಿ ಧಾಭಾ ಐತಿ ಎನ್ ಊಟ ಕೊಡ್ತಾನ ಅಂದಿ! ಅಂತ ನನ್ನ ಇನ್ನೊಬ್ಬ ಗೆಳೆಯ ಮಲ್ಲೇಶ್ ಹೇಳತೊಡಗಿದ್ದ. ಅಷ್ಟರಲ್ಲೇ ನನ್ನ ಮನಸ್ಸು ನನಗೂ ಅದೇ ಅನುಭವ ಆಗುತ್ತಿರುವದನ್ನ ಮೆಲುಕು ಹಾಕತೊಡಗಿತ್ತು.
ಮೊದಲಾದರೆ ಜಮೀನುಗಳಲ್ಲಿ ಗಳೆ ಹೊಡೆಯುತ್ತಿದ್ದ, ಕಳೆ ಕೀಳುತ್ತಿದ್ದ, ಮತ್ತು ತಮ್ಮ ಮನೆಯ ದನಕರುಗಳಿಗೆ ಮೇವು ಹೊಂದಿಸುತ್ತಿದ್ದ ಜನರ ಗುಂಪು ಕಣ್ಣ ಮುಂದೆ ಇರುತ್ತಿದ್ದ ಕಾಲದಲ್ಲಿ ಅಗಾಧವಾದ ಹಸಿವು ,ಮೈ ಬೆವರುವ ದುಡಿಮೆ, ಮತ್ತು ಉತ್ತಮವಾದ ಆರೋಗ್ಯವಂತ ಜನರನ್ನ ನೋಡುತ್ತಿದ್ದ ನನಗೆ, ಈಗೀಗ ಕಾಲ ಬದಲಾಗಿರುವ ಅರಿವು ಮೂಡುತ್ತಿದ್ದಂತೆಯೆ ಅರೆ ಹೌದಲ್ವ ಅನ್ನಿಸಿದ್ದಂತೂ ನಿಜ.
“ಎನರ ಅನ್ನು ದೋಸ್ತ ಯಾವ ಅಡುಗಿನೂ ಅವ್ವನ ಕೈ ರುಚಿ ಬರವಲ್ತು ” ಅನ್ನುವದರಿಂದ ಹಿಡಿದು ಯಾಕೋ ನಿನ್ನಿ ಆ ಹೋಟಲ್ ಒಳಗ್ ಊಟಾ ಮಾಡಿದ ಮ್ಯಾಲೆ ಹೊಟ್ಟಿನ ಕಡಿಯಾಕ್ ಹತ್ತೇತಿ ಅನ್ನುವದರ ತನಕ ಆಗಾಗ ಕಿವಿಗೆ ಬಿದ್ದ ಊಟದ ವಿಷಯ ನನ್ನನ್ನು ಇನ್ನಷ್ಟು ಯೋಚನೆಗೆ ಈಡು ಮಾಡಿದ್ದಂತೂ ನಿಜ.
ನಸುಕಿನ ವೇಳೆಗೆ ಎದ್ದು, ಒಲೆಯ ಬೂದಿ ಎಳೆದು ಬೆಂಕಿ ಹೊತ್ತಿಸಿ, ರೊಟ್ಟಿ ತಟ್ಟುತ್ತಿದ್ದ ಸದ್ದು ಕೇಳಿಸುವದು ಕಡಿಮೆ ಆಗಿ ಯಾವಾಗ ಸದ್ದಿಲ್ಲದೆ ಬೇಯುವ ಚಪಾತಿಗೆ ತಲುಪಿತೋ, ” ಇನಸ್ಟಂಟ್ ಪುಡ್ ಮತ್ತು ರೆಡಿ ಟು ಯೀಟ್ ” ಜಮಾನಾಕ್ಕೆ ಬಂದೆವೋ, ಆಗಲೆ ಶುರುವಾಗಿದ್ದು ಈ ಹಸಿವಿಲ್ಲ ಅನ್ನುವ ಆರ್ತನಾದದಿಂದ ಹಿಡಿದು ಯಾಕೋ ಬಾಯಿಗೆ ಎನೂ ಸ್ವಾದನ ಕೊಡವಲ್ತು ಅನ್ನುವ ಮಾತುಗಳು.
ಹಳೆಯ ಕಾಲದ ಮನೆಗಳಲ್ಲಿ ಇರುತ್ತಿದ್ದ ರುಬ್ಬುಕಲ್ಲು, ಒಳ್ಳು ಕಲ್ಲುಗಳು ಮಾಯವಾಗಿ ಮಿಕ್ಸರ್ ಅನ್ನುವ ಮಾಯೆ ಮನೆ ಹೊಕ್ಕು ಕೆಲ ನಿಮಿಷಗಳಲ್ಲೆ ಗುಂಯ್ಯ ಅಂತ ಸದ್ದು ಮಾಡಿ ಎಲ್ಲವನ್ನೂ ನುಣ್ಣಗೆ ಮಾಡತೊಡಗಿತೋ ಅಲ್ಲಿಂದಲೇ ಮನುಷ್ಯ ಅನ್ನುವ ಪ್ರಾಣಿ ಬಹುತೇಕ ಆಲಸಿ ಆಗತೊಡಗಿದ್ದು.
ಮ್ಯಾಗಿ, ನ್ಯೂಡಲ್, ಯಿಪ್ಪಿ, ಅಂತಹ ಶಾವಿಗೆ ಎರಡೇ ನಿಮಿಷಗಳಲ್ಲಿ ಬಿಸಿ ನೀರಿನಲ್ಲಿ ಹಾಕಿ ಕುದಿಸಿದರೆ ತಿನ್ನೊಕೆ ರೆಡಿ ಆಗತೊಗಿತೋ, ಸೇಂಗಾ ಹಿಂಡಿ, ಅಗಸಿ ಹಿಂಡಿ, ಉಪ್ಪಿನಕಾಯಿ, ಗಳಿಂದ ಹಿಡಿದು ಹೋಮ್ ಡೆಲಿವರಿಯ ಸ್ವಿಗ್ಗೀ, ಝೋಮ್ಯಾಟೋ, ಪಿಜ್ಜಾ ಹಟ್ ಗಳಂತಹ ವಿಭಿನ್ನ ಶೈಲಿಯ ಅಡುಗೆ ಮನೆಯ ಬಾಗಿಲಿಗೆ ಬರತೊಡಗಿತೋ ಬಹುಶಃ ಅಂದಿನಿಂದಲೇ ನಾಲಿಗೆ ಅನ್ನುವದು ತನ್ನ ರುಚಿಯನ್ನ ಕಳೆದುಕೊಳ್ಳತೊಡಗಿದೆ.
ನಾವೆಲ್ಲ ಸಣ್ಣವರಿದ್ದಾಗ ಅಕ್ಕ ಪಕ್ಕದ ಮನೆಯವರಿಂದ ಕಡ ತಂದ ಶಾವಿಗೆ ಮಣೆಯಲ್ಲಿ ಅವ್ವನೋ ಅಜ್ಜಿಯೋ ಬಸಿಯುತ್ತಿದ್ದ ಶಾವಿಗೆಯನ್ನ ಜತನದಿಂದ ತೆಗೆದುಕೊಂಡು ಅಂಗಳದಲ್ಲೋ ಮನೆಯ ಹಿತ್ತಲಿನಲ್ಲೋ ಇರಿಸಿದ್ದ ಬಿದಿರ ಗಳದ ಮೇಲೆ ಒಣಗಿಸುವ ಕೆಲಸ ಕೊಡುತ್ತಿದ್ದ ಖುಷಿ ಕಳೆದುಹೋಗಿರುವದದರ ಜೊತೆಗೆ ನಾಲಿಗೆ ರುಚಿಯೂ ಕಳೆದು ಹೋದದ್ದು ವಿಪರ್ಯಾಸ ಅಲ್ಲದೆ ಮತ್ತೆನೂ ಅಲ್ಲ.
ಬಿಪಿ ಚೆಕ್ ಮಾಡ್ಕೊಳ್ಳಿ, ಶುಗರ್ ಟೆಸ್ಟ್ ಮಾಡ್ಕೊಂಡ್ರಾ, ಲೈಟ್ ಅಟ್ಯಾಕ್ ಅಷ್ಟೇ ಡೋಂಟ್ ವರಿ ಪ್ಯಾಟ್ ಕಡಿಮೆ ಇರುವ ಆಹಾರ ಮಾತ್ರ ತಿನ್ನಿ ಅನ್ನುವ ವೈದ್ಯರ ಸಲಹೆಯ ತನಕ ಎಲ್ಲವೂ ಬದಲಾಗಿರುವ ಆಹಾರ ಶೈಲಿಯ ಕಡೆಗೆ ಕೈ ಮಾಡಿ ತೋರಿಸುತ್ತಿರುವದರ ಹಿಂದೆ ಚಾಟ್ ಮಸಾಲಾ ಬೆರೆಸಿದ ಆರೋಗ್ಯಕ್ಕೆ ಹಾನಿಕರ ಅನ್ನಿಸಿಕೊಂಡ ಅಜಿನೋಮೋಟೊ ಬೆರೆಸಿದ ಆಹಾರಗಳ ಜೊತೆಗೆ ಅನೈಸರ್ಗಿಕ ಬಣ್ಣ ಮತ್ತು ರುಚಿ ಬೆರೆಸಿದ ವಸ್ತುಗಳ ಊಟ, ನಾಲಗೆಯ ರುಚಿ ಕೆಡಿಸುವದರ ಜೊತೆಗೆ ನಿಧಾನವಾಗಿ ಆರೋಗ್ಯದ ಮೇಲೂ ದುಷ್ಪರಿಣಾಮವನ್ನ ಬೀರುತ್ತಲೇ ಇದೆ.
ಇಷ್ಟಕ್ಕೂ ಮನುಷ್ಯನ ಮೂಲಭೂತ ಗುಣವೆಂದರೆ ಯಾವುದನ್ನ ಮಾಡಬೇಡ ಅನ್ನುತ್ತೆವೋ ಅದರತ್ತಲೇ ಒಲವು ಅನ್ನುವದು ಸೆಳೆದುಕೊಳ್ಳುತ್ತ ಹೋಗುವದು.
ಪಾಮ್ ಆಯಿಲ್, ಸನ್ ಪ್ಲಾವರ್ ಆಯಿಲ್ ಹೀಗೆ ನೂರಾರು ಬ್ರಾಂಡ್ ಗಳ ಹೆಸರು ಹೊತ್ತ ಕೆಮಿಕಲ್ ಮಿಶ್ರಿತ ಅಡುಗೆ ಎಣ್ಣೆ ಅನ್ನುವ ಮತ್ತು ಮೊದಲೆಲ್ಲ ವನಸ್ಪತಿಗಳಿಂದ ತಯಾರಾಗುತ್ತಿದ್ದ ಡಾಲ್ಡಾ ಕೂಡ ಯಾವಾಗ ರಾಸಾಯನಿಕಗಳ ಸ್ಪರ್ಶ ಕಂಡುಕೊಂಡಿದೆಯೋ, ಅಂದಿನಿಂದಲೇ ಜಗತ್ತಿನಾದ್ಯಂತ ಹೃದಯಾಘಾತದ ಸಂಕ್ಯೆಯೂ ಹೆಚ್ಚಳವಾಗುತ್ತಿದೆ.
“ಕೇವಲ ದುಡ್ಡೊಂದಿದ್ದರೆ ದುನಿಯಾ” ಅಂದುಕೊಂಡ ಜನರು ಐಶಾರಾಮಿ ಜೀವನದತ್ತ ಮುಖ ಮಾಡಿ ಕ್ಷಣಿಕ ಸುಖಕ್ಕಾಗಿ ಜೀವಗಳನ್ನು ಬಲಿಕೊಡುತ್ತಿರುವದರ ಹಿಂದೆ ಇರುವದು ಕೇವಲ ಮನುಷ್ಯನ ಒಳಗಿರುವ ಹಣದಾಹ ಅಂದರೆ ತಪ್ಪಾಗಲಿಕ್ಕಿಲ್ಲ.
ಹೆಚ್ಚು ಇಳುವರಿ ಬರಲಿ ಅಂತ ಬಳಸುವ ಗೊಬ್ಬರ, ಯೂರಿಯಾ, ಕೀಟ ಬಾಧೆ ತಡೆಯಲು ಬಳಸುವ ರಾಸಾಯನಿಕಗಳು ಮನುಷ್ಯನ ದೇಹಕ್ಕೆ ಪರೋಕ್ಷವಾಗಿ ನುಗ್ಗಿ ಹಾನಿಯನ್ನ ಉಂಟು ಮಾಡುತ್ತಿರುವದನ್ನ ವಿಜ್ಞಾನಿಗಳಷ್ಟೇ ಅಲ್ಲ ಜನನಾಯಕರು ಕೂಗಿ ಕೂಗಿ ಹೇಳಿದರೂ ಕೇಳದ ಹಂತವನ್ನ ಈಗಾಗಲೇ ನಾವೆಲ್ಲ ತಲುಪಿಯಾಗಿದೆ.
ಈಗಲೂ ಸಂತೆಗೆ ಹೋದಾಗ ಬಟ್ಟೆಯ ಚೀಲ ಒಯ್ಯುವ ಮತ್ತು ಊಟ ಪಾರ್ಸಲ್ ತರುವಾಗ ಪ್ಲಾಸ್ಟಿಕ್ ಬೇಡ ಅನ್ನುವ ಜನರಿಗಿಂತ ಅಣ್ಣಾ ಒಂದ್ ಕ್ಯಾರಿಬ್ಯಾಗ್ ಕೊಡ್ರಿ ಅನ್ನುವವರ ಸಂಖ್ಯೆಯೆ ಹೆಚ್ಚಾಗಿದ್ದು, ತಂಬಾಕು ಸೇವನೆಯ ದುಷ್ಪರಿಣಾಮದ ಸರ್ಕಾರಿ ಜಾಹೀರಾತು ನಗಣ್ಯ ಅನ್ನಿಸುವ ಮತ್ತು ಆ ಜಾಹಿರಾತನ್ನೆ ಗುಟಕಾ ಅಗಿಯುತ್ತಲೋ ಸಿಗರೇಟಿನ ದಮ್ಮು ಹೊಡೆಯುತ್ತಲೋ ನೋಡಿಯೂ ನೋಡದಂತೆ ನಟಿಸುವ ಯುವಕರ ಸಂಖ್ಯೆಗೂ ಕಡಿಮೆ ಎನಿಲ್ಲ ಬಿಡಿ.
ಮೊದಲಾದರೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಅಂತ ನಿಖರವಾಗಿ ತಿಂಗಳುಗಳ ಮೂಲಕ ವಾತಾವರಣದ ಬದಲಾವಣೆಯನ್ನ ಗುರುತಿಸುತ್ತಿದ್ದ ಕಾಲವೂ ಈಗೀಗ ಕಳೆದುಹೋಗಿ ಅಕಾಲಿಕ ಮಳೆ,ಭೀಕರ ಬರ ಇಂತಹುಗಳೇ ನಮ್ಮ ಅವಿಭಾಜ್ಯ ಅಂಗ ಅನ್ನಿಸಿಕೊಂಡ ಮೇಲೆ ಸಾವು ನೋವು ಕಾಯಿಲೆ ವ್ಯಾಧಿಗಳನ್ನೆ ಅಲ್ಲವಾ ನಾವೆಲ್ಲ ಕೇಳುತ್ತಿರುವದು.
ಇಂದಿನ ಯುವಕರಲ್ಲಿ ಜಾತಿ ಧರ್ಮ ಅಂತೆಲ್ಲ ಇಲ್ಲ ಸಲ್ಲದ್ದನ್ನ ತಲೆಗೆ ತುಂಬಿ ಹಾದಿ ತಪ್ಪಿಸುವದಕ್ಕಿಂತ ಸ್ವ ಪ್ರೇರಿತವಾಗಿ ಒಂದಷ್ಟು ಜಾಗೃತಿ ಮೂಡಿಸುವ ಕೆಲಸವನ್ನು ಯಾವ ರಾಷ್ಟ್ರೀಯ ಪಕ್ಷಗಳಾಗಲಿ, ರಾಜಕಾರಣಿಗಳಾಗಲಿ ಮಾಡದೇ ಇದ್ದರೂ, ಇಂದಿನ ಯುವಕರೇ ನಾಳಿನ ಪ್ರಜೆಗಳು ಅನ್ನುವದನ್ನ ನೆನಪಿನಲ್ಲಿ ಇಟ್ಟುಕೊಂಡು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ನೈತಿಕ ಪ್ರಜ್ಞೆ ಮೂಡಿಸುವ ಕೆಲಸವನ್ನು ನಾವು ನೀವೆಲ್ಲ ಮಾಡುವ ತುರ್ತು ಅಗತ್ಯ ಈ ದಿನಗಳಲ್ಲಿ ಇದೆ.
ಮಳೆ ನೀರು ಕೋಯ್ಲಿನ ಮೂಲಕ ಅಂತರ್ಜಲ ಹೆಚ್ಚಿಸುವ, ಸಸಿಗಳನ್ನು ನೆಟ್ಟು ಹಸಿರು ವಾತಾವರಣ ನಿರ್ಮಿಸುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಹಾಗೂ ಜನಪದ ಕಲೆಗಳನ್ನು ಉಳಿಸಿಕೊಳ್ಳುವದರ ಜೊತೆಗೆ ಒಂದಷ್ಟು ಶಾರೀರಿಕ ಕಸರತ್ತು ಮಾಡಿಸುವ ದೇಶಿಯ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಗುಂಡು ಕಲ್ಲು ಎತ್ತುವ ಮತ್ತು ಈಜು ಸ್ಪರ್ಧೆಯಂತಹ ಕ್ರೀಡೆಗಳನ್ನ ಪ್ರೋತ್ಸಾಹಿಸುವದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ವ್ಯವಹಾರ ಮಾಡುವ ಅಂಗಡಿಯವರನ್ನೋ ಹಾಗೂ ಸಾವಯವ ಕೃಷಿ ಮೂಲಕ ಜವಾರಿ ಬೆಳೆಗಳನ್ನು ಬೆಳೆಯುವ ರೈತರನ್ನೋ ಪ್ರೋತ್ಸಾಹಿಸುವ ಕೆಲಸ ಮಾಡುವ ಮೂಲಕ ಸದ್ಯದ ಮಟ್ಟಿಗೆ ನಮಗೆ ಯಾವ ಲಾಭ ಇಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಗೆ ಆದರೂ ಪರೋಕ್ಷವಾಗಿ ಒಂದಷ್ಟು ಕೊಡುಗೆಯನ್ನ ಕೊಡೋಣ ಅಲ್ಲವಾ?? ಏನಂತೀರಿ…
. ಲೇಖನ – ದೀಪಕ ಶಿಂದೆ
