ಲೋಕಸಭಾ ಚುನಾವಣೆಗೆ ಕಾಂಗ್ರೇಸ್ ಪೂರ್ಣ ತಯಾರಿ ಮಾಡಿಕೊಂಡಿದೆ. ಹೇಗಾದರು ಮಾಡಿ ಕರ್ನಾಟಕದಲ್ಲಿ 28 ಸ್ಥಾನಗಳ ಪೈಕಿ, 20 ಸ್ಥಾನಗಳಲ್ಲಿ ಜಯ ಸಾಧಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೇಸ್ ನಾಯಕರು, ಅಭ್ಯರ್ಥಿಗಳ ಆಯ್ಕೆ ಬಹುತೇಕ ಸಿದ್ದಪಡಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಠಕ್ಕರ ಕೊಡಲು ಕಾಂಗ್ರೇಸ್ ಸಿದ್ಧತೆ ಮಾಡಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಸನ ಕ್ಷೇತ್ರಗಳು ಹೈ ವೋಲ್ಟೇಜ್ ಕ್ಷೇತ್ರಗಳಾಗಿವೆ. ಒಕ್ಕಲಿಗರ ಸಾಮ್ರಾಜ್ಯವನ್ನು ಹೇಗಾದರು ಮಾಡಿ ತನ್ನ ತೆಕ್ಕೆಗೆ ಹಾಕಿಕೊಂಡು ದಳಪತಿಗಳಿಗೆ ಶಾಕ್ ಕೊಡಲು ಕೈ ಪಾಳಯ ಸಮರಾಭ್ಯಾಸಕ್ಕೆ ಪೂರ್ಣ ತಯಾರಿ ನಡೆಸಿದೆ.
ಹಾಲಿ ಸಂಸದ ಡಿ ಕೆ ಸುರೇಶರನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ತಂತ್ರಗಾರಿಕೆಯಲ್ಲಿ ತೊಡಗಿರುವ ಬಿಜೆಪಿ ಹಾಗೂ ಜೆಡಿಎಸ್ ವರಿಷ್ಟರು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರಖ್ಯಾತ ವೈದ್ಯ ಡಾ. ಮಂಜುನಾಥರನ್ನು ಕಣಕ್ಕಿಳಿಸುವ ಬಗ್ಗೆ ಬಹುತೇಕ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೇಸ್ಸಿನಲ್ಲಿ ಲೋಕಸಭಾ ಟಿಕೇಟ್ ಪಡೆಯಲು ಪೈಪೋಟಿ ಎದುರಾಗಿದೆ. ಪ್ರತಿ ಕ್ಷೇತ್ರದಲ್ಲಿ ನಾಲ್ಕೈದು ಅಕಾಂಕ್ಷಿಗಳು ಟಿಕೇಟಗಾಗಿ ಪಕ್ಷದ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಈಗಾಗಲೇ ಡಿ ಕೆ ಸುರೇಶ ಮತ್ತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯುವದು ಖಾತ್ರಿಯಾಗಿದೆ.
28 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಸಂಭಾವ್ಯ ಅಭ್ಯರ್ಥಿಗಳನ್ನು ನೋಡೋದಾದ್ರೆ
ಕೋಲಾರದಿಂದ ಕೆ ಎಚ್ ಮುನಿಯಪ್ಪ, ಬೆಂಗಳೂರು ಉತ್ತರದಿಂದ ಕುಸುಮಾ, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ, ಹಾಸನದಿಂದ ಶ್ರೇಯಸ್ ಪಟೇಲ್, ಬೆಂಗಳೂರು ದಕ್ಷಿಣದಿಂದ ಸೌಮ್ಯ ರೆಡ್ಡಿ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮಹಮ್ಮದ ನಲಪಾಡ ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ್, ದಾವಣಗೆರೆಯಿಂದ ವಿನಯ್ ಕುಮಾರ್, ಚಾಮರಾಜನಗರದಿಂದ ಸಚಿವ ಮಹದೇವಪ್ಪನವರ ಪುತ್ರ ಸುನಿಲ್ ಬೋಸ್, ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್, ಮಂಡ್ಯದಿಂದ ಸ್ಟಾರ್ ಚಂದ್ರು ಅಥವಾ ಸುಮಲತಾ, ಚಿತ್ರದುರ್ಗದಿಂದ ಬಿ.ಎನ್.ಚಂದ್ರಪ್ಪ, ಬೀದರದಿಂದ ರಾಜಶೇಖರ್ ಪಾಟೀಲ್ ಅಥವಾ ಸಚಿವ ಖಂಡ್ರೆಯವರ ಮಗ, ತುಮಕೂರದಿಂದ ಎಸ್ಪಿ ಮುದ್ದಹನುಮೇಗೌಡ, ಕೊಪ್ಪಳದಿಂದ ರಾಘವೇಂದ್ರ ಹಿಟ್ನಾಳ್ ಅಥವಾ ಅಮರೇಗೌಡ ಬಯ್ಯಾಪುರ, ಬೆಳಗಾವಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಗ ಮೃಣಾಲ್ ಅಥವಾ ರಾಹುಲ್ ಜಾರಕಿಹೊಳಿ, ಚಿಕ್ಕೋಡಿಯಿಂದ ಗಣೇಶ ಹುಕ್ಕೇರಿ ಅಥವಾ ಲಕ್ಷ್ಮಣ ಸವದಿಯವರ ಮಗ, ಹಾವೇರಿಯಿಂದ ಶಾಸಕ ಶಿವಣ್ಣನವರ ಅಥವಾ ಆನಂದ ಗಡ್ಡದೇವರಮಠ, ಧಾರವಾಡದಿಂದ ಲಿಂಗಾಯತ ಕೋಟಾದಲ್ಲಿ ರಜತ್ ಉಳ್ಳಾಗಡ್ಡಿಮಠ, ಶಿವಲೀಲಾ ಕುಲಕರ್ಣಿ, ಮೋಹನ ಲಿಂಬಿಕಾಯಿ, ಓ ಬಿ ಸಿ ಇಂದ ನೋಡೋದಾದ್ರೆ ವಿನೋದ ಅಸೂಟಿ, ಲೋಹಿತ ನಾಯ್ಕರ ಹೆಸರು ಚಾಲ್ತಿಯಲ್ಲಿದ್ದು, ಕಡೆಘಳಿಗೆಯಲ್ಲಿ ಹಾಲಿ ಸಚಿವ ಸಂತೋಷ ಲಾಡ ಅಭ್ಯರ್ಥಿಯಾದರು ಅಚ್ಚರಿ ಪಡಬೇಕಿಲ್ಲ.
ಇನ್ನು ಮಂಗಳೂರು, ಉಡುಪಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮುಖಂಡರು, ಕಾದು ನೋಡಿ, ಅಚ್ಚರಿಯ ಅಭ್ಯರ್ಥಿ ಹೆಸರನ್ನು ಅಖೈರುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.