ಜನ ಕುಡಿಯುವ ನೀರಿಗೆ ಪರಿತಪಿಸುತ್ತಿರುವಾಗ ರಾಜ್ಯ ಕಾಂಗ್ರೇಸ್ ಸರ್ಕಾರ ತನ್ನ 5 ಗ್ಯಾರೆಂಟಿಗಳ ಸಮಾವೇಶಕ್ಕೆ ಕೋಟ್ಯಾಂತರ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ರಾಜ್ಯದಲ್ಲಿ ಜಲಕ್ಷಾಮ ಎದುರಾಗಿದೆ. ಮಹಾನಗರಗಳಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಇಂತದರಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ, ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ ಗ್ಯಾರೆಂಟಿ ಸಮಾವೇಶ ನಡೆಸುತ್ತಿದೆ ಎಂದು ವಿರೋದ ಪಕ್ಷದ ನಾಯಕ ಆರ್ ಅಶೋಕ ಕಿಡಿಕಾರಿದ್ದಾರೆ.
ಜಿಲ್ಲಾ ಮಟ್ಟದ ಗ್ಯಾರೆಂಟಿ ಕಾರ್ಯಕ್ರಮಗಳಿಗೆ ಒಂದು ಕೋಟಿ, ತಾಲೂಕಾ ಮಟ್ಟದಲ್ಲಿ ನಡೆಯುವ ಸಮಾವೇಶಕ್ಕೆ 50 ಲಕ್ಷ ಮತ್ತು ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಭಾಗವಹಿಸುವ ಗ್ಯಾರೆಂಟಿ ಸಮಾವೇಶಕ್ಕೆ ಎರಡು ಕೋಟಿ ವೆಚ್ಚ ಮಾಡಬೇಕೆಂದು ಅದಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿಗಳು 08-02-2024 ರಂದು ಟಿಪ್ಪಣಿ ನೀಡಿದ್ದು, ಅದಕ್ಕೆ ಆರ್ಥಿಕ ಇಲಾಖೆ 04-03-2024 ರಂದು ಒಪ್ಪಿಗೆ ನೀಡಿದೆ.
ಇದನ್ನು ಪ್ರಶ್ನಿಸಿರುವ ಆರ್ ಅಶೋಕ, ರಾಜ್ಯ ಕಾಂಗ್ರೇಸ್ ಸರ್ಕಾರ ಆರ್ಥಿಕ ದಿವಾಳಿಗೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಗ್ಯಾರೆಂಟಿ ಸಮಾವೇಶ ನಡೆಸಿದ್ದು, ನವಲಗುಂದದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ನಡೆದ ಗ್ಯಾರೆಂಟಿ ಸಮಾವೇಶಕ್ಕೆ ಎಷ್ಟು ಖರ್ಚಾಗಿದೆ ಎಂಬುದನ್ನು ಜಿಲ್ಲಾಧಿಕಾರಿಗಳು ಮಾಹಿತಿ ನೀಡಬೇಕಿದೆ.
