ನೇಹಾ ಹಿರೇಮಠ ಕಗ್ಗೊಲೆ ಅನೇಕರ ಕಣ್ಣಲ್ಲಿ ನೀರು ತರಿಸಿದೆ. ಹೆತ್ತವರ ಮಡಿಲು ಬರಿದಾಗಿಸಿದ ಹಂತಕ ಫಯಾಜ ವಿರುದ್ಧ ಇಂದು ಧಾರವಾಡದ ಅಂಜುಮನ್ ಸಂಸ್ಥೆಯಲ್ಲಿ ಆಕ್ರೋಶ ಮಡುಗಟ್ಟಿತ್ತು.
ಜಸ್ಟಿಸ್ ಫಾರ್ ನೇಹಾ ಎಂಬ ಘೋಷಣೆ ಮೊಳಗಿತ್ತು. ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೇಹಾ ಕೊಲೆ ಪ್ರಕರಣವನ್ನು ಖಂಡಿಸಲಾಯಿತು. ಅಂಜುಮನ್ ಸಂಸ್ಥೆ ಸಹ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ನೇಹಾಳ ಮೇಲೆ ನಡೆದ ಅಮಾನುಷ ಕೃತ್ಯವನ್ನು ಸಭೆಯಲ್ಲಿದ್ದವರು ಖಂಡಿಸಿದರು.
ನೇಹಾಳಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಧಾರವಾಡದ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಸೋಮವಾರ ಧಾರವಾಡದಲ್ಲಿ ಬೃಹತ್ ಮೌನ ಪ್ರತಿಭಟನೆಗೆ ಕರೆಕೊಟ್ಟಿದ್ದು, ಅಂದು ಧಾರವಾಡದ ಮುಸ್ಲಿಮ್ ವ್ಯಾಪಾರಿಗಳು ವ್ಯವಹಾರ ಸ್ಥಗಿತಗೊಳಿಸಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಸೋಮವಾರದಂದು ಸುಮಾರು 10 ಸಾವಿರ ಜನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ನೇಹಾ ಹಿರೇಮಠ ಹಂತಕನಿಗೆ ಉಗ್ರ ಶಿಕ್ಷೆ ಕೊಡುವಂತೆ ಆಗ್ರಹ ಮಾಡಲಿದ್ದಾರೆ.
