ಹುಬ್ಬಳ್ಳಿಯ ಯುವತಿಯನ್ನು ಅನ್ಯಕೋಮಿನ ಯುವಕ ಕೊಲೆ ಮಾಡಿರುವ ಪ್ರಕರಣ ಹುಬ್ಬಳ್ಳಿಯ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಈಗ ಮಠಾಧೀಶರು ಕೂಡ ಬೀದಿಗೆ ಇಳಿದು ಹೋರಾಟಕ್ಕೆ ಮುಂದಾಗಿದ್ದಾರೆ.
ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನ ಕ್ಯಾಂಪಸ್ ನಲ್ಲಿಯೇ ಫಯಾಝ್ ಎಂಬುವಂತ ದುಷ್ಕರ್ಮಿ, ನೇಹಾ ಹಿರೇಮಠ ಎಂಬಾಕೆಯನ್ನು ಕೊಲೆ ಮಾಡಿರುವುದಕ್ಕೆ ಧಾರವಾಡ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಮಠಾಧೀಶರು ಸುರಿಯುವ ಮಳೆಯಲ್ಲಿಯೇ ಹೋರಾಟ ನಡೆಸಿದರು.
ಕೈಯಲ್ಲಿ ಬಿತ್ತಿ ಪತ್ರ ಹಿಡಿದ ಮಠಾಧೀಶರು, ನೇಹಾ ಕೊಲೆ ಮುಂದಿಟ್ಟುಕೊಂಡು ಎರಡು ರಾಜಕೀಯ ಪಕ್ಷಗಳು ರಾಜಕೀಯ ಮಾಡುತ್ತಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ಮುರುಘಾಮಠ ಶ್ರೀಗಳು, ದಿಂಗಾಲೇಶ್ವರ ಶ್ರೀಗಳು ಸೇರಿದಂತೆ ವಿವಿಧ ಮಠಗಳು 20 ಕ್ಕು ಹೆಚ್ಚು ಮಠಾಧೀಶರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇನ್ನೂ ರಾಜಕೀಯ ಪಕ್ಷಗಳು ಯುವತಿ ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನೇಹಾ ಹಿರೇಮಠ ಸಾವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ವಿನಃ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಆಗುತ್ತಿಲ್ಲ ಎಂದು ಮಠಾಧೀಶರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರವೇ ಕಣ್ಣೀರು ಹಾಕುವ ಸಂದರ್ಭದಲ್ಲಿ ಕೂಡ ಲವ್ ಜಿಹಾದ್, ವೈಯಕ್ತಿಕ ಕಾರಣ ಎಂದು ಎರಡು ಸರ್ಕಾರಗಳು ನೇಹಾ ಸಾವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ನೀವೆಲ್ಲರೂ ಆ ಸ್ಥಾನದಲ್ಲಿ ಕುಳಿತುಕೊಳ್ಳಲು ನಿಮಗೆ ನೈತಿಕತೆಯೇ ಇಲ್ಲ ಎಂದು ಮಠಾಧೀಶರು ನೇಹಾ ಹಿರೇಮಠ ಸಾವಿನ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು.
