ನಾಲ್ಕು ವರ್ಷಗಳ ಬಳಿಕ ಮಾಜಿ ಸಚಿವ ವಿನಯ ಕುಲಕರ್ಣಿ ಇಂದು ಧಾರವಾಡಕ್ಕೆ ಬಂದಿದ್ದರು. ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕೋರಿ ಹೈಕೋರ್ಟಗೆ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ, ಮತದಾನ ಮಾಡಿ ಬರಲು ಅವಕಾಶ ನೀಡಿ ಆದೇಶ ಹೊರಡಿಸಿದೆ.
ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯದ ಆದೇಶದಂತೆ ಜಿಲ್ಲೆಯಿಂದ ಹೊರಗಿರುವ ವಿನಯ ಕುಲಕರ್ಣಿ, ಕ್ಷೇತ್ರದ ಹೊರಗೆ ಇದ್ದುಕೊಂಡೆ ಶಾಸಕರಾಗಿ ಆಯ್ಕೆಯಾಗಿದ್ದರು.
ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕಿರುವದರಿಂದ ಮತದಾನ ಮಾಡಲು ಅವಕಾಶ ನೀಡಬೇಕು ಎಂದು ವಿನಯ ಕುಲಕರ್ಣಿ ಹೈಕೋರ್ಟ ಮೆಟ್ಟಲೇರಿದ್ದರು. ನ್ಯಾಯಾಲಯದ ಆದೇಶದಂತೆ ಧಾರವಾಡಕ್ಕೆ ಬಂದಿದ್ದ ವಿನಯ ಕುಲಕರ್ಣಿ, ಶಾರದಾ ಸ್ಕೂಲ್ ನಲ್ಲಿರುವ 75 ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿ ಮತ್ತೆ ವಾಪಸ ಮರಳಿದ್ದಾರೆ. ಕುಲಕರ್ಣಿಯವರು ಬರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಶಾರದಾ ಸ್ಕೂಲ್ ಎದುರು ಜಮಾಯಿಸಿ, ನೆಚ್ಚಿನ ನಾಯಕನಿಗೆ ಜಯಘೋಷ ಕೂಗಿದರು. ವಿನಯ ಕುಲಕರ್ಣಿ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು.
ಮುಂಚಿತವಾಗಿ ಬಂದು ನಿಂತಿದ್ದ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಮಗಳು ವೈಶಾಲಿ ಜೊತೆ ಮತಗಟ್ಟೆಯತ್ತ ಹೆಜ್ಜೆ ಹಾಕಿದ ವಿನಯ ಕುಲಕರ್ಣಿ ಮತ ಚಲಾಯಿಸಿದರು.