ಭಾರತದ ಮುಸ್ಲಿಮರ ಜನಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿನ್ನೆ ಸುವರ್ಣ ನ್ಯೂಸ್ ಬಿತ್ತರಿಸಿದ್ದ ಸುದ್ದಿ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸುವರ್ಣ ನ್ಯೂಸ್ ವಿಷಾದ ವ್ಯಕ್ತಪಡಿಸಿದೆ.
ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಜನಸಂಖ್ಯೆ ಕುರಿತು ವರದಿ ಬಿಡುಗಡೆ ಮಾಡಿತ್ತು. ಅದರಲ್ಲಿ ಮುಸ್ಲಿಮರ ಜನಸಂಖ್ಯೆ ಹಿಂದುಗಳಿಗಿಂತ ಹೆಚ್ಚಾಗಿದೆ ಎಂದು ಹೇಳಿತ್ತು. ಸುವರ್ಣ ನ್ಯೂಸ್ ನಲ್ಲಿ ಈ ಸುದ್ದಿ ಪ್ರಕಟವಾಗಿ ಹಿಂದುಗಳ ಜನಸಂಖ್ಯೆ ಮುಂದೆ ಭಾರತದ ದ್ವಜ ಹಾಕಿ ಭಾರತೀಯ ಮುಸ್ಲಿಮರ ಮುಂದೆ ಪಾಕ ದ್ವಜ ಹಾಕಿ ಭಾರತೀಯ ಪ್ರಜೆಗಳನ್ನು ಧರ್ಮದ ಆಧಾರದ ಮೇಲೆ ಅವಮಾನಿಸಿತ್ತು.
ಇದು ಮುಸ್ಲಿಮ್ ಸಮುದಾಯ ಸೇರಿದಂತೆ ಇನ್ನುಳಿದವರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಸುವರ್ಣ ನ್ಯೂಸ್ ಮೇಲೆ ದೂರು ಧಾಖಲು ಮಾಡಲು ಕೆಲವರು ಮುಂದಾಗಿದ್ದರು. ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸುವರ್ಣ ನ್ಯೂಸ್ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದೆ. ಕಣ್ತಪ್ಪಿನಿಂದ ನಡೆದ ತಪ್ಪು ಇದಾಗಿದ್ದು, ಗಮನಕ್ಕೆ ಬಂದ ತಕ್ಷಣ ಪಾಕ್ ದ್ವಜ ತೆಗೆಯಲಾಗಿದೆ ಎಂದು ಹೇಳಿದೆ. ಜೊತೆ ಈ ವರದಿ ದುರುದ್ದೇಶದಿಂದ ಕೂಡಿರಲಿಲ್ಲ ಎಂದು ಸುವರ್ಣ ನ್ಯೂಸ್ ವಿಷಾದ ವ್ಯಕ್ತಪಡಿಸಿದೆ. ಕರ್ನಾಟಕ ಫೈಲ್ಸ್ ಸಹ ಇದನ್ನು ಖಂಡಿಸಿ ವರದಿ ಬಿತ್ತರಿಸಿದ್ದನ್ನು ಸ್ಮರಿಸಬಹುದಾಗಿದೆ.