ಹಾಸನದ ಅಶ್ಲೀಲ ವಿಡಿಯೋಗಳಿದ್ದ ಪೆನ್ ಡ್ರೈವ್ ದೊಡ್ಡ ಸುದ್ದಿ ಮಾಡುತ್ತಿದ್ದಂತೆ ಇದೀಗ ಶಿವಮೊಗ್ಗದ ಪೆನ್ ಡ್ರೈವ್ ಸುದ್ದಿ ಮಾಡಿದೆ. ಹಾಸನದ್ದು ಅಶ್ಲೀಲ ವಿಡಿಯೋ ಇರುವ ಪೆನ್ ಡ್ರೈವ್ ಆದರೆ, ಶಿವಮೊಗ್ಗದಲ್ಲಿನ ಪೆನ್ ಡ್ರೈವ್ ನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಸಂಸದ ಬಿ ವೈ ರಾಘವೇಂದ್ರರು ಭಾಷಣ ತಿರುಚಿದ್ದಕ್ಕೆ ಸಂಬಂಧಪಟ್ಟಿದ್ದು ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ವಿರುದ್ದ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೆ ಎಸ್ ಈಶ್ವರಪ್ಪನವರು, ಬಿ ವೈ ರಾಘವೇಂದ್ರ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. ಬಿ ವೈ ರಾಘವೇಂದ್ರ ಅವರು ಈ ಚುನಾವಣೆ ಸಂದರ್ಭದಲ್ಲಿ ತಮ್ಮ ಈ ಹಿಂದಿನ ಹೇಳಿಕೆಗಳನ್ನು ತಿರುಚಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
“ನಾನು ಜೀವನದಲ್ಲಿ ತಪ್ಪು ಮಾಡಲ್ಲ. ಆದರೆ ನಾನು ತಪ್ಪು ಮಾಡಿದ್ದೇನೆ , ಕಾಂಗ್ರೆಸ್ ಗೆ ಲಾಭ ಆಗೋದು ಬೇಡ ಹೀಗಾಗಿ ಬಿಜೆಪಿಗೆ ಮತ ನೀಡಿ, ನನ್ನ ತಪ್ಪಿನ ಅರಿವಾಗಿದೆ ಎನ್ನುವ ರೀತಿ ಸುಳ್ಳು ಸುದ್ದಿ ಮಾಡಿದ್ದಾರೆ. ಕೂಡಲೇ ರಾಘವೇಂದ್ರರನ್ನ ಬಂಧನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದಿನ ಚುನಾವಣೆಯಲ್ಲಿ ರಾಘವೇಂದ್ರರನ್ನು ಬೆಂಬಲಿಸಬೇಕು ಎಂದು ಹೇಳಿರುವ ವಿಡಿಯೋ ಬಳಸಿಕೊಂಡ್ಡಿದ್ದನ್ನು ಪೆನ್ ಡ್ರೈವ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೂರಿನ ಅಂಶಗಳನ್ನು ಒಳಗೊಂಡ ಪೆನ್ ಡ್ರೈವನ್ನು ಪತ್ರಕರ್ತರಿಗೆ ಈಶ್ವರಪ್ಪ ಹಂಚಿದ್ದಾರೆ.
