ಧಾರವಾಡದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯ ಚಾಲಕನೊಬ್ಬ ಕೊಡೆ ಹಿಡಿದು ಬಸ್ಸು ಓಡಿಸಿದ ವಿಡಿಯೋ ವೈರಲ್ ಆಗಿದೆ. ಆ ವೈರಲ್ ಆದ ವಿಡಿಯೋವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
KA 25 F1336 ಸಂಖ್ಯೆಯ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಸು ಬೆಟಗೇರಿ ಇಂದ ಧಾರವಾಡ ಕಡೆ ಸಂಚಾರಿಸುತ್ತಿದ್ದಾಗ ವಾಯುವ್ಯ ಸಾರಿಗೆ ಬಸ್ ಚಾಲಕ ಹನುಮಂತಪ್ಪ ಕಿಲ್ಲೆದಾರ ಎಂಬುವವರು ಕೈಯಲ್ಲಿ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ್ದಾರೆ.
ಮಳೆ ಬರುತ್ತಿದ್ದಾಗ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ ಚಾಲಕ ಹನುಮಂತಪ್ಪ ಕಿಲ್ಲೆದಾರನ ದೃಶ್ಯವನ್ನು ನಿರ್ವಾಹಕಿ ಅನಿತಾ ಎಂಬುವವರು ಚಿತ್ರೀಕರಣ ಮಾಡಿದ್ದಾರೆ. ಇದು ಮನರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣ ಎಂದು ವಾಯುವ್ಯ ಸಾರಿಗೆ ಸಂಸ್ಥೆ ಸ್ಪಷ್ಟಿಕರಣ ನೀಡಿದ್ದು, ಆ ಸಮಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ಚಾಲಕ ಹಾಗೂ ನಿರ್ವಾಹಕಿ ವರದಿ ನೀಡಿದ್ದಾರೆ ಎಂದು ಸಂಸ್ಥೆ ಹೇಳಿಕೆ ನೀಡಿದೆ.