ಹೇಳಿ ಕೇಳಿ ಧಾರವಾಡ ಹೋರಾಟದ ನೆಲ. ಕರ್ನಾಟಕ ಏಕೀಕರಣ, ಗೋಕಾಕ ಚಳುವಳಿ ಸೇರಿದಂತೆ ನೆಲ,ಜಲ, ಭಾಷೆ, ಸಂಸ್ಕೃತಿ ಮೇಲೆ ದಬ್ಬಾಳಿಕೆ ನಡೆದಾಗಲೆಲ್ಲ ಮುಲಾಜಿಲ್ಲದೆ ದ್ವನಿ ಎತ್ತಿದ ಸ್ಥಳ ಧಾರವಾಡ. ಅದೇ ಧಾರವಾಡ ಮತ್ತೊಂದು ಹೋರಾಟಕ್ಕೆ ಕರೆ ಕೊಟ್ಟಿದೆ.
ಅಂತಹ ಧಾರವಾಡ ಇವತ್ತು ಮಹಿಳೆಯರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ಧಾರವಾಡದ ವೀರ ವನಿತೆಯರು ಹಾಸನದ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ಪ್ರಗತಿಪರರು, ಚಿಂತಕರು, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಹಾಸನ ಚಲೋ ಕಾರ್ಯಕ್ರಮಕ್ಕೆ ಕರೆ ನೀಡಿವೆ.
ಇದೇ ದಿನಾಂಕ 30 ರಂದು ಹಾಸನದಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಲು ನಾಳೆ ಸಂಜೆ ಧಾರವಾಡದಿಂದ ನೂರಕ್ಕೂ ಹೆಚ್ಚು ಜನ ಹಾಸನಕ್ಕೆ ಹೊರಟಿದ್ದಾರೆ.
ಸ್ವಯಂ ಪ್ರೇರಿತವಾಗಿ ಜನ ಈ ಆಂದೋಲನದಲ್ಲಿ ಭಾಗವಹಿಸಲು ಹೊರಟಿದ್ದು ಮತ್ತೊಂದು ವಿಶೇಷ. ಇವತ್ತು ಧಾರವಾಡದಲ್ಲಿ ಹುಬ್ಬಳ್ಳಿಯ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಖಂಡಿಸಿ, ಪ್ರಗತಿಪರ ಚಿಂತಕ ಶಂಕರ ಹಲಗತ್ತಿ ಹಾಗೂ ಅವರ ಒಡನಾಡಿಗಳು ನಡೆಸಿದ ಮೌನ ಪ್ರತಿಭಟನೆ ಯಶಸ್ವಿಯಾಗಿದೆ.
ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದಂತಹ ಅಮಾನವೀಯ ಘಟನೆಗಳು ಮರುಕಳಿಸಬಾರದು ಎಂದು ಮಹಿಳೆಯರು ಹಾಸನದತ್ತ ಹೊರಟಿದ್ದು, ಹೋರಾಟದ ನೆಲಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ.
ಹಾಸನದ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದು, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ 30 ರಂದು ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
