ಹುಬ್ಬಳ್ಳಿಯ ನೇಹಾ ಕೊಲೆ ನಂತರ ಸುದ್ದಿ ಮಾಡಿದ್ದ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿರುವ ಸಿ ಐ ಡಿ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ಇದೆಲ್ಲದರ ಮದ್ಯೆ ಅಂಜಲಿ ಕೊಲೆಗೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ತಿರುವು ಸಿಕ್ಕಿದ್ದು, ದಲಿತ ಸಂಘಟನೆಗಳ ಮಹಾಮಂಡಳ, ಈ ಕೊಲೆಯ ಹಿಂದೆ ಮತ್ತೊಬ್ಬನ ಕುಮ್ಮಕ್ಕಿನ ಬಗ್ಗೆ ಸಿಐಡಿ ಡಿ ಜಿ ಪಿ ಸಲೀಮ್ ಅವರಿಗೆ ದೂರು ಸಲ್ಲಿಸಿದೆ.
ದೂರಿನ ಸಾರಾಂಶ
ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಖಂಡನಾರ್ಹ. ಕೊಲೆಗೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ಗೆ ವಹಿಸಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದಂತೆ ಕೆಲವರು ದಿನಕ್ಕೊಂದು ಹೇಳಿಕೆ ನೀಡುತ್ತಾ, ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ಅಂಜಲಿ ಕೊಲೆ ಹಿಂದೆ ಕುಮ್ಮಕ್ಕು ಇದೆ ಎಂದು ದೂರಿನಲ್ಲಿ ತಿಳಿಸಿರುವ ಗುರುನಾಥ ಉಳ್ಳಿಕಾಶಿ, ಅಂಜಲಿ ಕೊಲೆಯ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಧಾಖಲಾಗಿರುವ ( ಅಂಜಲಿ ಮೇಲೆ ಲೈಂಗಿಕ ದೌರ್ಜನ್ಯ ) ದೂರು ಸಂಖ್ಯೆ 0166/2021 ಅನ್ನು ಉಲ್ಲೇಖ ಮಾಡಿರುವ ಉಳ್ಳಿಕಾಶಿ 16-02-2022 ರಂತೆ ಪ್ರಕರಣದ ತನಿಖೆ ನಡೆಸಿ ಆರೋಪಿ ಈರಣ್ಣ ಅಲಿಯಾಸ ವಿಜಯ ಬಸಯ್ಯ ಕಲ್ಲನಮಠ ಅಲಿಯಾಸ್ ಹಿರೇಮಠ ಎಂಬುವನನ್ನ ಪೋಸ್ಕೊ ಕಾಯ್ದೆಯಡಿ ಬಂಧಿಸಲಾಗಿತ್ತು. ಸದರಿ ಪ್ರಕರಣದ ವಿಚಾರಣೆಯು 18-06-2024 ರಿಂದ ಆರಂಭವಾಗಬೇಕಿತ್ತು.
ಅಷ್ಟರಲ್ಲಿ ಅಂಜಲಿಯ ಹತ್ಯೆಯಾಗಿದ್ದು ದುರದೃಷ್ಟಕರ ಎಂದಿರುವ ಉಳ್ಳಿಕಾಶಿ, ಅಂಜಲಿ ಹತ್ಯೆಗೆ ಕುಮ್ಮಕ್ಕು ನೀಡಿರುವ ಗುಮಾನಿ ಕಂಡು ಬರುತ್ತಿದೆ. ಹಾಗಾಗಿ ಸಿಐಡಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಬೇಕೆಂದು ದಲಿತ ಸಂಘಟನೆಗಳ ಮಹಾಮಂಡಳ ಸಿಐಡಿ ಡಿಜಿಪಿ ಸಲೀಮ್ ಅವರಿಗೆ ಮನವಿ ನೀಡಿದೆ.
