ನರೇಂದ್ರ ಮೋದಿ ನೇತ್ರತ್ವದ ಈ ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಅಗ್ನಿವೀರ ಮತ್ತು ಏಕರೂಪ ನಾಗರಿಕ ಸಂಹಿತೆ ಕುರಿತು ಜೆಡಿಯು ನಾಯಕ ಕೆ ಸಿ ತ್ಯಾಗಿ, ಮಹತ್ವದ ಹೇಳಿಕೆ ನೀಡಿದ್ದಾರೆ.
ಎನ್ ಡಿ ಎ ಸರ್ಕಾರ ರಚನೆಗೂ ಮುನ್ನ ಮಾತನಾಡಿರುವ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ ಸಿ ತ್ಯಾಗಿ, ಅಗ್ನಿವೀರ ಯೋಜನೆ ಮತ್ತು ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಮಗ್ರ ಚರ್ಚೆ ನಡೆಸಿ, ಪುನರ್ ಪರಿಶೀಲನೆ ನಡೆಸಬೇಕೆಂದು ಹೇಳಿದ್ದಾರೆ. ಜೆಡಿಯು ಇದೀಗ ಬಿಜೆಪಿಗೆ ಒಂದೊಂದೆ ಷರತ್ತು ಹಾಕುತ್ತಿದ್ದು, ಅವರು ಹೇಳಿದ ಷರತ್ತನ್ನು ಪಾಲಿಸುವ ಅನಿವಾರ್ಯತೆ ಇದೀಗ ಬಿಜೆಪಿ ಪಾಲಿಗೆ ಬಂದಿದೆ.
“ಅಗ್ನಿವೀರ್ ಮತ್ತು ಯುಸಿಸಿ ಬಗ್ಗೆ ಚರ್ಚಿಸುವ ಅಗತ್ಯವಿದೆ” – ಜೆಡಿಯು ಪ್ರಧಾನ ಕಾರ್ಯದರ್ಶಿ ಕೆಸಿ ತ್ಯಾಗಿ
ಏಕರೂಪ ನಾಗರಿಕ ಸಂಹಿತೆ ಕುರಿತು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದು, ಅದರ ವಿರುದ್ಧ ತಾವು ಇಲ್ಲ ಆದರೆ ಈ ಬಗ್ಗೆ ಸಮಗ್ರ ಚರ್ಚೆಯ ಅಗತ್ಯವಿದೆ ಎಂದು ಕೆಸಿ ತ್ಯಾಗಿ ಹೇಳಿದರು. ಇದರಲ್ಲಿ ಎಲ್ಲ ಪಾಲುದಾರರೂ ಇದ್ದಾರೆ, ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜಕೀಯ ಪಕ್ಷಗಳು, ಎಲ್ಲರೊಂದಿಗೆ ಚರ್ಚಿಸಿದ ನಂತರ ಸಮಗ್ರ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಕೆಸಿ ತ್ಯಾಗಿ ಹೇಳಿದರು.
