ಮುಲಾಜೆ ಇಲ್ಲಾ… ಮುಲಾಜೆ ಇಲ್ಲಾ..ಮುಲಾಜು ಅನ್ನೋ ಶಬ್ದ ಡಿಕ್ಸನರಿನಲ್ಲಿಯೇ ಇಲ್ಲಾ. ಹುಬ್ಬಳ್ಳಿ ಧಾರವಾಡದಲ್ಲಿ ಎನ್ ಮಾಡಿದ್ರು ನಡಿತೈತೆ ಅನ್ನೋ ಮಾತೇ ಇಲ್ಲಾ. ಎಲ್ಲವು ಖತಂ ಖತಂ.
ಹೌದು ಇಷ್ಟು ದಿನ ಹುಬ್ಬಳ್ಳಿ ಧಾರವಾಡದಲ್ಲಿ ಅಣ್ಣ, ಬಾಸ್, ದಾದಾ ಅಂತೆಲ್ಲ ಕರೆಸಿಕೊಂಡು ಮೆರೆದಾಡಿದ್ದವರು ಇದೀಗ ಬಾಲ ಮುಡಿದುಕೊಂಡು ಕುಂದ್ರುವಂತಾಗಿದೆ. ಖಾಕಿ ಖದರ್ ಗೆ ಕ್ರೈಮ್ ಲೋಕದಲ್ಲಿ ತೇಲುತ್ತಿದ್ದವರು ಪತರುಗುಟ್ಟಿ ಹೋಗಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಹೊಸ ಕಮಿಷನರ್ ಆಗಿ ಎನ್ ಶಶಿಕುಮಾರ ಬಂದಿದ್ದೆ ತಡ. ರೌಡಿಗಳ ಡ್ರಿಲ್ ಮಾಡಲು ಶುರು ಹಚ್ಚಿದ್ದಾರೆ. ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಅನ್ನೋ ರೀತಿಯಲ್ಲಿ ಹೊಸ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅವರು ರಿಯಲ್ ಖಾಕಿ ಖದರ್ ತೋರಿಸುತ್ತಿದ್ದಾರೆ.
ಒಂದು ಕಾಲಕ್ಕೆ ಠಾಣೆಯಲ್ಲಿ ಫ್ರೆಂಡ್ ಆಗಿದ್ದವರನ್ನು ಈಗ ಅನ್ ಫ್ರಂಡ್ ಮಾಡಲಾಗುತ್ತಿದೆ. ರಾಜ್ಯದ ಎರಡನೇ ರಾಜಧಾನಿ, ರಾಜಕೀಯ ಶಕ್ತಿ ಕೇಂದ್ರ ಅಂತೆಲ್ಲ ಬಿರುದು ಪಡೆದಿದ್ದ ಹುಬ್ಬಳ್ಳಿ ಧಾರವಾಡದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿತ್ತು. ಆಕ್ರಮ ಚಟುವಟಿಕೆ ತಲೆ ಎತ್ತಿತ್ತು.
ಕಮಿಷನರ್ ಆಗಿ ಅಧಿಕಾರ ಸ್ವೀಕಾರ ಮಾಡಿದ ಕೇವಲ ನಾಲ್ಕು ದಿನದಲ್ಲಿ ಎನ್ ಶಶಿಕುಮಾರ ಅವರು ನೆಮ್ಮದಿ ಹಾಳು ಮಾಡುವವರ ಜನ್ಮ ಜಾಲಾಡುತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡಕ್ಕೆ ಹೊಸ ಪೊಲೀಸ ಕಮಿಷನರ್ ಬರ್ತಿದ್ದಂತೆ ಹುಬ್ಬಳ್ಳಿ ಧಾರವಾಡದ ಎಲ್ಲಾ ಅಣ್ತಮ್ಮಾಸ್ ಗೆ ನಡುಕ ಶುರುವಾಗಿದೆ. ಒಂದರ ಮೇಲೊಂದರಂತೆ ಗಾಂಜಾ ಪೆಡ್ಲರಗಳ ಹೆಡೆಮುರಿಗೆ ಕಟ್ಟಲಾಗುತ್ತಿದೆ.
