ಬಡತನ ಮುಕ್ತ ರಾಷ್ಟ್ರ ಕಲ್ಪನೆ ಇಂದಿರಾಗಾಂಧಿಯವರ ಕಾಲದಿಂದಲೂ ಇದೆ. 1971 ರಲ್ಲಿ ಇಂದಿರಾ ಗಾಂಧಿಯವರ 20 ಅಂಶಗಳ ಗರೀಬಿ ಹಠಾವೋ ಘೋಷಣೆ, ಬಡತನ, ಆರೋಗ್ಯ, ಶಿಕ್ಷಣ, ನಿರುದ್ಯೋಗದಂತಹ ಸಮಸ್ಯೆಗಳ ಬಗ್ಗೆ ಹೆಸರು ಮಾಡಿತ್ತು.
ಅದು ಆ ಕಾಲದ ಜನಪ್ರಿಯ ಚುನಾವಣೆಯ ವಿಷಯವಾಗಿತ್ತು. ಅಂದಿನಿಂದ ಇಂದಿನವರಿಗೂ ನಮ್ಮನ್ನಾಳಿದ ಸರ್ಕಾರಗಳು ಬಡತನ ಮುಕ್ತ ರಾಷ್ಟ್ರದ ಬಗ್ಗೆ ಹೇಳುತ್ತಲೇ ಬಂದಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳು, ರಾಜಕಾರಣಿಗಳ ಹಿಂಬಾಲಕರು, ಉಳ್ಳವರ ಮತ್ತು ಪ್ರಭಾವಿಗಳ ಪಾಲಾಗುತ್ತಿರುವದು, ಬಡ ಕುಟುಂಬಗಳು ಬೀದಿಯಲ್ಲಿ ಮಲಗುವ ಪರಿಸ್ಥಿತಿಗೆ ತಂದೂಡ್ಡಿವೆ. ಅರ್ಹ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಯಡಿ ಸಿಗಬೇಕಾದ ಮನೆಗಳು ಅನರ್ಹರ ಪಾಲಾಗುತ್ತಿವೆ.
ಬಸವ ವಸತಿ ಯೋಜನೆ,
ಡಾ. ಅಂಬೇಡ್ಕರ ವಸತಿ ಯೋಜನೆ,
ರಾಜೀವ ಗಾಂಧಿ ಆವಾಸ್ ಯೋಜನೆ,
ಪ್ರಧಾನಮಂತ್ರಿ ಆವಾಸ ಯೋಜನೆ ಸೇರಿದಂತೆ ಅನೇಕ ವಸತಿ ಯೋಜನೆಗಳು ಅರ್ಹರಿಗೆ ಸಿಗುತ್ತಿಲ್ಲ.
ಧಾರವಾಡ ಜಿಲ್ಲೆಯಲ್ಲಿ 2011 ರ ಜನಗಣತಿ ಪ್ರಕಾರ ಆಶ್ರಯಕ್ಕೆ ಮನೆ ಇಲ್ಲದೆ 509 ಕುಟುಂಬಗಳು ಬೀದಿಯಲ್ಲಿ ಬದುಕು ಕಟ್ಟಿಕೊಂಡಿವೆ. ಇಂತಹ ಕುಟುಂಬಗಳು, ಗುಡಿಸಲು ಹಾಕಿಕೊಂಡು ಕಾಲ ಕಳೆಯುತ್ತಿವೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಮತ್ತು ನವಲಗುಂದದಲ್ಲಿ ಹಂಚಿಕೆಯಾದ ಆಶ್ರಯ ಮನೆಗಳು, ಮನೆ ಇದ್ದವರ ಪಾಲಾಗಿವೆ ಅನ್ನೋ ಆರೋಪ ಕೇಳಿ ಬಂದಿದ್ದು, ಅಣ್ಣಿಗೇರಿಯಲ್ಲಿ ನಡೆದ ಮನೆ ಹಂಚಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು, ಜಿಲ್ಲಾಧಿಕಾರಿ ದಿವ್ಯ ಪ್ರಭು, ಉಪ ವಿಭಾಗಾಧಿಕಾರಿಗಳ ನೇತ್ರತ್ವದಲ್ಲಿ ಸಮಿತಿ ರಚನೆ ಮಾಡಿದ್ದಾರೆ.
ಇಂಡೋ ಗ್ಲೋಬಲ್ ಸೋಶಿಯಲ್ ಸರ್ವಿಸ್ ಸೊಸೈಟಿ (IGSSS) ಯ ವರದಿ ಪ್ರಕಾರ, ಹೆಚ್ಚಿನ ನಿರಾಶ್ರಿತರು ಮನೆ ಕೆಲಸಗಾರರು ಮತ್ತು ದಿನಗೂಲಿ ಕಾರ್ಮಿಕರಾಗಿದ್ದಾರೆ.
ಭಾರತದಲ್ಲಿ ಸುಮಾರು 80% ನಿರಾಶ್ರಿತರು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಮತ್ತು ಶೇಕಡಾ 60% ರಷ್ಟು ಜನ ಅವರು ವಾಸಿಸುವ ಸ್ಥಳದಲ್ಲಿಯೆ ಜನಿಸಿದವರಾಗಿದ್ದಾರೆ.
ಈ ಸಮೀಕ್ಷೆಯು ದೇಶದ 15 ನಗರಗಳಲ್ಲಿ, 4382 ಜನರನ್ನು ಒಳಗೊಂಡಿದೆ. ಸಮೀಕ್ಷೆಯಲ್ಲಿ ನಿರಾಶ್ರಿತರನ್ನು ಮಾತ್ರ ಪರಿಗಣಿಸಲಾಗಿದೆ. ನಿರಾಶ್ರಿತರು ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಾಗಿ ಸಂಜೆ ಮತ್ತು ರಾತ್ರಿಯಲ್ಲಿ ಸಮೀಕ್ಷೆ ಮಾಡಲಾಗಿದೆ.
2019 ರ ಐಜಿಎಸ್ಎಸ್ಎಸ್ ಸಮೀಕ್ಷೆಯ ಪ್ರಕಾರ, ಸುಮಾರು 41.6% ನಿರಾಶ್ರಿತರು ಯಾವುದೇ ರೀತಿಯ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಹೊಂದಿಲ್ಲ ಅನ್ನೋದು ಬಹಿರಂಗಗೊಂಡಿದೆ.
ಒಟ್ಟು 1.77 ಮಿಲಿಯನ್ ಭಾರತೀಯರು ನಿರಾಶ್ರಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.
