ದಲಿತರ ಮಕ್ಕಳು ಸ್ಪರ್ಧಾತ್ಮಕ ತರಬೇತಿ ಪಡೆದು, ಪರೀಕ್ಷೆ ಎದುರಿಸಿ ಉನ್ನತ ಅಧಿಕಾರಿಗಳಾಗಲಿ ಎಂದು ಸಮಾಜ ಕಲ್ಯಾಣ ಇಲಾಖೆ ಮಹತ್ವದ ಯೋಜನೆ ಜಾರಿಗೆ ತಂದಿದೆ.
ಆದರೆ ಆ ಯೋಜನೆ ಬಡ ದಲಿತರ ಮಕ್ಕಳ ವಿಧ್ಯಾರ್ಜನೆಗಿಂತ ತರಬೇತಿ ಕೇಂದ್ರಗಳ ಹೊಟ್ಟೆ ತುಂಬಿಸುತ್ತಿದೆ.
ಶೈಕ್ಷಣಿಕ ಕಾಶಿ ಎಂದು ಕರೆಯಲ್ಪಡುವ ಧಾರವಾಡದಲ್ಲಿ KAS / IAS ತರಬೇತಿ ಕೇಂದ್ರಗಳು ತುಂಬಿ ತುಳುಕುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ ಅತ್ಯಂತ ಮಹತ್ವದ ಯೋಜನೆಯೊಂದು, ತರಬೇತಿ ಕೇಂದ್ರದವರಿಗೆ ಹಣ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿದೆ.
ಧಾರವಾಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಸ್ಪರ್ಧಾತ್ಮಕ ತರಬೇತಿಗಾಗಿ ಆಯ್ಕೆಯಾಗಿರುವ ವಿಧ್ಯಾರ್ಥಿಗಳಿಗೆ ಧಾರವಾಡದ ವಿವಿಧ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲು ಸಮಾಜದ ಕಲ್ಯಾಣ ಇಲಾಖೆ ಉತ್ತಮ ಯೋಜನೆ ತಂದಿದ್ದು ಶ್ಲಾಘನೀಯವಾಗಿದೆ.
ಈ ಯೋಜನೆಯಡಿ ವಿವಿಧ ತರಬೇತಿ ಕೇಂದ್ರಗಳಿಗೆ ದಲಿತ ವಿಧ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಧಾರವಾಡದ ವಿವಿಧ ತರಬೇತಿ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
2024-25 ರ ಅವಧಿಯಲ್ಲಿ 1800 ವಿಧ್ಯಾರ್ಥಿಗಳು ಧಾರವಾಡದಲ್ಲಿರುವ ಕ್ಲಾಸಿಕ್, ಐ ಸಿ ಎಸ್, ಗುರುಕುಲ, ಚಿಗರು, ಮಹಾತ್ಮ ಗಾಂಧಿ ಸೇರಿದಂತೆ 8 ಕ್ಕೂ ಹೆಚ್ಚು ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯಲು ವಿಧ್ಯಾರ್ಥಿಗಳು ನಿಯೋಜನೆ ಗೊಂಡಿದ್ದಾರೆ
ಆಯ್ಕೆಯಾಗಿರುವ ವಿಧ್ಯಾರ್ಥಿಗಳಿಗೆ 4 ತಿಂಗಳ ಅವಧಿಗೆ ಸಮಾಜ ಕಲ್ಯಾಣ ಇಲಾಖೆ ಪ್ರತಿ ವಿಧ್ಯಾರ್ಥಿಗೆ 40 ಸಾವಿರ ರೂಪಾಯಿ ಖರ್ಚು ಮಾಡುತ್ತಿದೆ. ಅಲ್ಲದೆ ಪ್ರತಿ ತಿಂಗಳು ವಿಧ್ಯಾರ್ಥಿಗಳ ಭೋಜನಕ್ಕಾಗಿ ಸಮಾಜ ಕಲ್ಯಾಣ ಇಲಾಖೆ 5 ಸಾವಿರ ರೂಪಾಯಿ ಕೊಡುತ್ತಿದೆ.
ನಿಯಮದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಿಗೆ ಆಯ್ಕೆಯಾಗಿರುವ ವಿಧ್ಯಾರ್ಥಿಗಳಿಗೆ ದಿನಕ್ಕೆ 8 ತಾಸು ಪಾಠ ಮಾಡುವಂತೆ ಇಲಾಖೆ ಷರತ್ತು ವಿಧಿಸಿದೆ. ಅಲ್ಲದೆ ತರಗತಿಗಳಿಗೆ ಹಾಜರಾಗುವ ವಿಧ್ಯಾರ್ಥಿಗಳ ಬಯೋ ಮೆಟ್ರಿಕ್ ( ಕಡ್ಡಾಯ ಹಾಜರಾತಿ ) ಪಡೆದುಕೊಳ್ಳಬೇಕೆಂಬ ನಿಯಮವಿದೆ
ಆದರೆ ಇದಾವ ನಿಯಮಗಳು ತರಬೇತಿ ಕೇಂದ್ರದಲ್ಲಿ ಪಾಲನೆಯಾಗುತ್ತಿಲ್ಲ. ಅಲ್ಲದೆ ತರಬೇತಿಗೆ ನಿಯೋಜನೆಗೊಂಡ ವಿಧ್ಯಾರ್ಥಿಗಳ ತರಗತಿ ನಡೆಯುತ್ತಿಲ್ಲ. ಆದರು ಎಲ್ಲ ವಿಧ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ ಎಂದು ಧಾಖಲೆ ಸೃಷ್ಟಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇಲಾಖೆಯ ಯೋಜನೆ ಬಗ್ಗೆ ನನ್ನ ಹತ್ತಿರ ಮಾಹಿತಿ ಇಲ್ಲಾ ಎಂದ ಧಾರವಾಡದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶೋಭಾ
ಈ ಕುರಿತು ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶೋಭ ಎಂಬುವವರನ್ನು ಕರ್ನಾಟಕ ಫೈಲ್ಸ್ ಸಂಪರ್ಕಿಸಿದಾಗ ನಮಗೂ ಅದಕ್ಕೂ ಸಂಬಂಧವಿಲ್ಲ. ಆ ಯೋಜನೆ ಬಗ್ಗೆ ಗೊತ್ತಿಲ್ಲ ಅಂತಾರೆ.
ಧಾರವಾಡದಲ್ಲಿ ತರಬೇತಿ ಕೇಂದ್ರವನ್ನು ಆಯ್ಕೆಮಾಡಿಕೊಂಡ ವಿಧ್ಯಾರ್ಥಿಗಳ ಮಾಹಿತಿ ಧಾರವಾಡ ಜಿಲ್ಲೆಯ ಸಮಾಜದ ಕಲ್ಯಾಣ ಇಲಾಖೆಯಲ್ಲಿ ಇರಬೇಕು. ಅವರ ಬಳಿ ಮಾಹಿತಿ ಇದೆ. ಅವರೇ ಖುದ್ದು ಪ್ರತಿ ತಿಂಗಳು ತರಬೇತಿ ಕೇಂದ್ರಕ್ಕೆ ಹೋಗಿ, ತರಗತಿಗಳು ನಡೆಯುತ್ತಿದೆಯೋ ಇಲ್ಲವೋ, ಅಥವಾ ತರಗತಿಗಳು ನಡೆದಿದ್ದರು, ಎಷ್ಟು ವಿಧ್ಯಾರ್ಥಿಗಳು ಹಾಜರಾಗುತ್ತಿದ್ದಾರೆ ಅನ್ನೋದನ್ನ ಕೇಂದ್ರ ಕಚೇರಿಗೆ ವರದಿ ಕಳಿಸಬೇಕು ಅನ್ನೋ ನಿಯಮವಿದೆ. ಆದರೆ ಕಚೇರಿಯಲ್ಲಿಯೇ ಕುಳಿತು ಧಾಖಲೆ ಸಿದ್ದಪಡಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಇಷ್ಟೇಲ್ಲ ಇದ್ದರು ಸಹ ಧಾರವಾಡದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶೋಭ, ಎಲ್ಲಾ ಮಾಹಿತಿಗಳನ್ನು ಗೌಪ್ಯವಾಗಿಟ್ಟಿದ್ದು, ಸಂಶಯಕ್ಕೆ ಎಡೆ ಮಾಡಿದೆ.
ಕರ್ನಾಟಕ ಕಂಡ ದಕ್ಷ ಅಧಿಕಾರಿ ಪಿ ಮಣಿವಣ್ಣನ ಅವರು ಸಮಾಜ ಕಲ್ಯಾಣ ಇಲಾಖೆ ಉಸ್ತುವಾರಿ ವಹಿಸಿಕೊಂಡ ಬಳಿಕ ಮಾದರಿ ಕೆಲಸ ಮಾಡುತ್ತಿದ್ದು, ಅವರ ಶ್ರಮಕ್ಕೆ ಮಣ್ಣೇರಚುವ ಕೆಲಸವನ್ನು ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ, ದಲಿತ ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿ ಕೊಡಲು ಧಾರವಾಡ ಜಿಲ್ಲೆಯಲ್ಲಿ ವರ್ಷಕ್ಕೆ 7 ಕೋಟಿ ಹಣ ವೆಚ್ಚ ಮಾಡುತ್ತಿದೆ. ದಲಿತ ವಿಧ್ಯಾರ್ಥಿಗಳ ಕೋಟ್ಯಾಂತರ ಹಣ ತರಬೇತಿ ಕೇಂದ್ರದವರ ಹೊಟ್ಟೆ ತುಂಬಿಸುತ್ತಿದೆ.
