ಧಾರವಾಡದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸದ್ದಿಲ್ಲದೇ ಕೋಟ್ಯಾಂತರ ರೂಪಾಯಿ ಅವ್ಯವಹಾರದ ಶಂಕೆ ವ್ಯಕ್ತವಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿ ಪಡೆಯಲು ಸಮಾಜ ಕಲ್ಯಾಣ ಇಲಾಖೆಯಿಂದ ದಲಿತ ವಿಧ್ಯಾರ್ಥಿಗಳನ್ನು ಧಾರವಾಡದ ವಿವಿಧ ತರಬೇತಿ ಕೇಂದ್ರಗಳಿಗೆ ನಿಯೋಜಿಸಲಾಗಿದೆ.
ನಾಲ್ಕು ತಿಂಗಳ ಅವಧಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ನಿಯಮಾವಳಿಯಂತೆ ತರಗತಿಗಳು ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸಮಾಜ ಕಲ್ಯಾಣ ಇಲಾಖೆ ದಲಿತ ವಿಧ್ಯಾರ್ಥಿಗಳ ನಾಲ್ಕು ತರಬೇತಿ ಅವಧಿಗೆ, ಪ್ರತಿ ವಿಧ್ಯಾರ್ಥಿಗೆ 40 ಸಾವಿರ ರೂಪಾಯಿ ತರಬೇತಿ ಶುಲ್ಕ ಹಾಗೂ ಭೋಜನಕ್ಕೆಂದು ತಿಂಗಳಿಗೆ 5 ಸಾವಿರ ರೂಪಾಯಿ ನೀಡುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 1800 ವಿಧ್ಯಾರ್ಥಿಗಳಿಗೆ ತರಬೇತಿ ನೀಡಲು ಸಮಾಜ ಕಲ್ಯಾಣ ಇಲಾಖೆ ನಾಲ್ಕು ತಿಂಗಳಿಗೆ 7 ಕೋಟಿಯಷ್ಟು ಹಣ ಖರ್ಚು ಮಾಡುತ್ತಿದೆ.
ತರಬೇತಿಗೆ ಹಾಜರಾದ ವಿಧ್ಯಾರ್ಥಿಗಳಿಗೆ ದಿನಕ್ಕೆ 8 ಘಂಟೆ ಪಾಠ ಮಾಡಬೇಕಾಗಿದ್ದು, ತರಬೇತಿ ಕೇಂದ್ರಗಳು ಬಯೋ ಮೆಟ್ರಿಕ್ ( ಹಾಜರಾತಿ ) ವ್ಯವಸ್ಥೆ ಅಳವಡಿಸಕೊಳ್ಳಬೇಕೆಂಬ ನಿಯಮವಿದೆ.
ಇಷ್ಟೆಲ್ಲಾ ನೀತಿ ನಿಯಮಗಳಿದ್ದರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಯಮ ಪಾಲನೆಯತ್ತ ಗಮನ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಧಾರವಾಡ ಜಿಲ್ಲೆಯ ದಕ್ಷ ಜಿಲ್ಲಾಧಿಕಾರಿ ಎಂದೇ ಹೆಸರಾಗಿರುವ ದಿವ್ಯ ಪ್ರಭ ಅವರು ಸಮಾಜ ಕಲ್ಯಾಣ ಇಲಾಖೆಯ ಕಡೆ ಗಮನ ಹರಿಸಬೇಕಾಗಿದೆ.
