ಹುಬ್ಬಳ್ಳಿ – ಧಾರವಾಡ ಅವಳಿನಗರಗಳಲ್ಲಿ ಬೀದಿ ನಾಯಿಗಳ ಸಮೀಕ್ಷೆ ಕಾರ್ಯವನ್ನು 15 ದಿನದೊಳಗಾಗಿ ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ಸೂಚನೆ ನೀಡಿದ್ದಾರೆ. 2018 ರಲ್ಲಿ ಬೀದಿ ನಾಯಿಗಳ ಗಣತಿ ನಡೆದಿತ್ತು. ಅದಾದ ಮೇಲೆ ಇದೀಗ ಮತ್ತೆ ಗಣತಿ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ಜರುಗಿದ ಪ್ರಾಣಿ ಸಂತಾನ ನಿಯಂತ್ರಣ ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಮೀಕ್ಷೆಯು ಸರಕಾರೇತರ ಸಂಘ ಸಂಸ್ಥೆಗಳ ಮೂಲಕ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಸಾರ್ವಜನಿಕರ ಹಾಗೂ ಪ್ರಾಣಿಗಳ ಸುರಕ್ಷತೆ ದೃಷ್ಟಿಯಿಂದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಸ್ಟಾಂಡರ್ಡ ಆಪರೇಟಿಂಗ್ ಪ್ರೋಸಿಜರ್) ಪ್ರಕಾರ ನುರಿತ ತಜ್ಞರಿಂದ ಸಮೀಕ್ಷೆ ಕೈಗೊಳ್ಳಬೇಕೆಂದು ಅವರು ಸೂಚಿನೆ ನೀಡಿದ್ದಾರೆ.
2018 ರ ಸಮೀಕ್ಷೆ ಪ್ರಕಾರ ಅವಳಿನಗರಗಳಲ್ಲಿ 26 ಸಾವಿರ ಹಾಗೂ ಜಿಲ್ಲೆಯಾದ್ಯಂತ 50 ಸಾವಿರ ಬೀದಿ ನಾಯಿಗಳು ಇರಬಹುದು ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಪಾಲಿಕೆಯಿಂದ ನಾಯಿಗಳ ಸರ್ವೆ ಹಾಗೂ ಸಂತಾನ ಚಿಕಿತ್ಸೆಗೆ ಅಗತ್ಯ ವೈಜ್ಞಾನಿಕ ಪದ್ಧತಿಯ ವಿವರಗಳನ್ನು ಟೆಂಡರ್‍ನಲ್ಲಿ ನಮೂದಿಸತಕ್ಕದ್ದು. ಸೂಕ್ತ ಸಂಘ-ಸಂಸ್ಥೆಗಳ ಹಾಗೂ ತಜ್ಞರ ಜೊತೆ ಚರ್ಚಿಸಿ ಸೂಕ್ತ ನಿಗಾವಹಿಸಿ ಒಂದು ವರ್ಷದೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬಹುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ನಗರ ಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿಯೂ ಸಹ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸಮೀಕ್ಷೆ ಹಾಗೂ ಸಂತಾನ ಚಿಕಿತ್ಸೆ ಕೈಗೊಳ್ಳುವಂತೆ ಅವರು ತಿಳಿಸಿದರು. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಸೂಚಿಸಿದ ರೀತಿಯಲ್ಲಿ ನಾಯಿಗಳ ಗಣತಿಯನ್ನು ನಡೆಸತಕ್ಕದು. ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಅವಶ್ಯಕ ಮೂಲ ಸೌಕರ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಹೇಳಿದರು. ಕನಿಷ್ಠ 70 ಪ್ರತಿಶತದಷ್ಟು ನಾಯಿಗಳ ಜನನ ನಿಯಂತ್ರಣವನ್ನು ಹಂತ ಹಂತವಾಗಿ ಕೈಗೊಳ್ಳತಕ್ಕದ್ದೆಂದರು.
ಬೀದಿನಾಯಿಗಳ ಸಮೀಕ್ಷೆ ಹಾಗೂ ಸಂತಾನ ನಿಯಂತ್ರಣಕ್ಕೆ ಒಟ್ಟು 1.40 ಕೋಟಿ ರೂ ಟೆಂಡರ್
ಬೀದಿನಾಯಿಗಳ ಸಮೀಕ್ಷೆ ಹಾಗೂ ಸಂತಾನ ನಿಯಂತ್ರಣಕ್ಕೆ ಒಟ್ಟು 1.40 ಕೋಟಿ ರೂ ಟೆಂಡರ್ ಕರೆಯಲಾಗುತ್ತಿದ್ದು. ಪ್ರತಿ ನಾಯಿಯ ಶಸ್ತ್ರ ಚಿಕಿತ್ಸೆಗೆ 1650 ವೆಚ್ಚ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಭರಿಸುತ್ತಿತ್ತು.
