ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ರಾಜ್ಯವ್ಯಾಪಿ ನಡೆಸುತ್ತಿರುವ ಮುಷ್ಕರಕ್ಕೆ ಸರ್ಕಾರ ಸೊಪ್ಪು ಹಾಕುತ್ತಿಲ್ಲ ಎನ್ನಲಾಗಿದೆ. ಮತ್ತೊಂದೆಡೆ ಗ್ರಾಮ ಆಡಳಿತ ಅಧಿಕಾರಿಗಳು ಸಾಮೊಹಿಕ ರಜೆ ಹಾಕಿ ಕೆಲಸದಿಂದ ದೂರ ಉಳಿದಿದ್ದಾರೆ.
ಇಂದು ಕಂದಾಯ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಗ್ರಾಮ ಆಡಳಿತ ಅಧಿಕಾರಿಗಳು ರಾಜ್ಯದಾದ್ಯಂತ ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ಯಾವುದೇ ಅಡಚಣೆ ಇಲ್ಲದಂತೆ ಒದಗಿಸುವ ಹಿತದೃಷ್ಠಿಯಿಂದ, ಕಂದಾಯ ಇಲಾಖೆಯ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಹಂತದ ಕಛೇರಿ ಸಿಬ್ಬಂದಿಗಳನ್ನು ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡಾಟ ಎಂಟ್ರಿ ಆಪರೇಟರ್ ಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರ, ಸಿಎಸ್‌ಸಿ ಸೆಂಟರ್, ಜನಸೇವಕ್ ಸೆಂಟರ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್, ರಾಜೀವ್ ಗಾಂಧಿ ಸೇವಾ ಕೇಂದ್ರ ಗ್ರಾಮ ಒನ್ ಕೇಂದ್ರಗಳಿಗೆ ತುರ್ತಾಗಿ ನಿಯೋಜಿಸುವಂತೆ ಹೇಳಲಾಗಿದೆ.
ಸಾರ್ವಜನಿಕರಿಂದ Online ಹಾಗೂ Offline ನಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ನಿಯಮಾನುಸಾರ ಇತ್ಯರ್ಥಪಡಿಸಿ, ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ, ನಿಮ್ಮ ಅಧೀನದಲ್ಲಿನ ಸಹಾಯಕ ಆಯುಕ್ತರುಗಳು, ತಹಶೀಲ್ದಾರರು, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಕಚೇರಿಯ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಸೇವೆಗಳನ್ನು ಒದಗಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಸೂಚಿಸಿದೆ.
ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಸೇವೆಗಳನ್ನು ಒದಗಿಸುವಲ್ಲಿ ಯಾವುದೇ ವ್ಯತ್ಯಯವಾಗದಂತೆ ಹಾಗೂ ಅಗತ್ಯವಿದ್ದಲ್ಲಿ ಪೋಲಿಸ್ ಇಲಾಖೆ ಮೂಲಕ ಸೂಕ್ತ ರಕ್ಷಣೆ ಒದಗಿಸಿ ಕೆಲಸ ಮಾಡುವಂತೆ ಹೇಳಿದೆ. ಸಾರ್ವಜನಿಕರಿಗೆ ಸೇವೆಗಳು ಲಭ್ಯವಾಗುವಂತೆ ಮಾಡಿಕೊಡಲು ಸೂಚಿಸಿದೆ.