ಹುಬ್ಬಳ್ಳಿಯ ಇದಗಾ ಮೈದಾನದ ವಿವಾದ ಬಗೆಹರಿಸುವಲ್ಲಿ ಮುಂದಾಳತ್ವ ವಹಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಇಸ್ಮಾಯಿಲ್ ಕಾಲೆಬುಡ್ದೆ ನಿಧನರಾಗಿದ್ದಾರೆ.
ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕಾಲೇಬುಡ್ಡೆಯವರು ಜನತಾದಳದಿಂದ ವಿಧಾನ ಪರಿಷತ ಸದಸ್ಯರಾಗಿದ್ದರು.
1998 ರಿಂದ 2004 ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಹುಬ್ಬಳ್ಳಿಯ ಅಂಜುಮನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 88 ವರ್ಷ ವಯಸ್ಸಿನ ಕಾಲೇಬುಡ್ಡೆಯವರು ಕೊನೆ ಕ್ಷಣದವರೆಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೋಮು ಸಾಮರಸ್ಯಕ್ಕಾಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸಿಕ್ಕಿತ್ತು.
ಹುಬ್ಬಳ್ಳಿಯ ಸ್ವಗ್ರಹದಲ್ಲಿ ಕಾಲೇಬುಡ್ಡೆಯವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಇಂದು ಮುಂಜಾನೆ 11 ಘಂಟೆಗೆ ಅಂತಿಮಯಾತ್ರೆ ನಡೆಯಲಿದೆ.
ಕಾಲೇಬುಡ್ಡೆಯವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಅಬ್ಬಯ್ಯ ಪ್ರಸಾದ, ಮಾಜಿ ಸಚಿವ, ಹುಬ್ಬಳ್ಳಿ ಅಂಜುಮನ್ ಅಧ್ಯಕ್ಷ ಎ ಎಂ ಹಿಂಡಸಗೇರಿ, ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸೇರಿದಂತೆ ಅನೇಕ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.
