ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಆಕ್ರೋಶ ಶಮನಗೊಂಡಿದೆ.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು ಭೇಟಿ ಮಾಡಿದ್ದ ಖಾದ್ರಿಯವರನ್ನು ಮನವೊಲಿಸಲಾಗಿದೆ.
ಸಚಿವ ಜಮೀರ್ ಅಹ್ಮದ್ ಖಾನ್ ಸಮ್ಮುಖದಲ್ಲಿ ಖಾದ್ರಿಯವರ ಜೊತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಸುಧೀರ್ಘ ಚರ್ಚೆ ನಡೆಸಿ, ನಾಮಪತ್ರ ವಾಪಸ್ ಪಡೆಯುವಂತೆ ಹೇಳಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮನವೊಲಿಸಿದ ನಂತರ ಪಕ್ಷ ಹೇಳಿದಂತೆ ನಡೆದುಕೊಳ್ಳುವದಾಗಿ ಖಾದ್ರಿ ಹೇಳಿದ್ದು, ನಾಳೆ ಬೆಂಬಲಿಗರ ಸಭೆ ಕರೆದಿದ್ದಾರೆ.
ಶಿಗ್ಗಾವ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಅಜ್ಜಂಪೀರ ಖಾದ್ರಿಯವರಿಗೆ ಎಂ ಎಲ್ ಸಿ ಸ್ಥಾನ ಒಲಿದು ಬರಲಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ ಅವರ ಸಮ್ಮುಖದಲ್ಲಿಯೇ ಈ ಚರ್ಚೆ ನಡೆದಿದೆ ಎನ್ನಲಾಗಿದೆ.