ಡೊಳ್ಳಿನ ಪದ ಹಾಡುವಲ್ಲಿ ರಾಜ್ಯವ್ಯಾಪಿ ಹೆಸರು ಮಾಡಿರುವ ಇಮಾಮಸಾಬ ಒಲ್ಲೆಪ್ಪನವರ (I M Tailor ) ಇವರಿಗೆ ಕರ್ನಾಟಕ ಸರ್ಕಾರ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.
58 ವರ್ಷದಿಂದ ಭಾವೈಕ್ಯತೆ ಸಾರುವ ಡೊಳ್ಳಿನ ಪದ ಹಾಡುತ್ತಾ, ಜಾನಪದ ಲೋಕದಲ್ಲಿ ಹೆಸರು ಮಾಡಿದ ಇಮಾಮಸಾಬ, 1998 ರಿಂದ 2001 ರ ವರೆಗೆ ಜಾನಪದ ಅಕಾಡೆಮಿ ಸದಸ್ಯರಾಗಿಯೂ, ಇಮಾಮಸಾಬ ಸೇವೆ ಮಾಡಿದ್ದಾರೆ.
ಜಾನಪದ ವಿ ವಿ ಯಲ್ಲಿ ಉಪನ್ಯಾಸಕರಾಗಿ ಸೇವೆ ಮಾಡಿರುವ ಇಮಾಮಸಾಬರನ್ನು ಇವತ್ತಿಗೂ ಜನ ಐ ಎಂ ಟೇಲರ್ ಎಂದೇ ಕರೆಯುತ್ತಾರೆ. ಇವರ ಜಾನಪದ ಕ್ಷೇತ್ರದಲ್ಲಿನ ಸಾಧನೆಗೆ ಸಂಘ ಸಂಸ್ಥೆಗಳು ನೀಡುವ ರಾಣಿ ಚೆನ್ನಮ್ಮ ಪ್ರಶಸ್ತಿ, ಬಸವ ಪ್ರಶಸ್ತಿ ಗಳು ಸಿಕ್ಕಿವೆ.
ಅಧ್ಯಾತ್ಮಿಕ ಮತ್ತು ಭಾವೈಕ್ಯತೆ ಸಾರುವ ಹಾಡುಗಳ ಸುಮಾರು 20 ಲಕ್ಷ ಕ್ಯಾಸೆಟ್ ಗಳು ಹಾಗೂ ಸಿ ಡಿ ಗಳು ಮಾರಾಟವಾಗಿವೆ.
ಇವರು ನಡೆಸಿಕೊಟ್ಟ, ಶಿಶುನಾಳ ಶರೀಫರ ತತ್ವರಸ ಅನುಭವ ಕಾರ್ಯಕ್ರಮ, 52 ರಾಷ್ಟ್ರಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರಗೊಂಡಿದೆ. ಜರ್ಮನ್ ದೇಶದಲ್ಲಿ ನೇರ ಪ್ರಸಾರದಲ್ಲಿ ಭಾಗಿಯಾಗಿದ್ದಾರೆ.
69 ವರ್ಷ ವಯಸ್ಸಿನ ಇಮಾಮಸಾಬ ಇಂದಿಗೂ ಒಂದು ಸಾವಿರ ಹಾಡುಗಳನ್ನು ಹಾಡುತ್ತಾರೆ. ನಿಂತ ನಿಂತಲ್ಲೇ ಹಾಡು ರಚನೆ ಮಾಡುವದು ಇವರ ಸ್ಪೆಶಾಲಿಟಿ. ಒಮ್ಮೆ ವೇದಿಕೆ ಮೇಲೆ ನಿಂತರೆ ಸಾಕು 8 ತಾಸುಗಳ ಕಾಲ ನಿರಂತರವಾಗಿ ಹಾಡುತ್ತಾರೆ.
ಸಾಕಷ್ಟು ಕಡು ಬಡತನದಲ್ಲಿ ಹುಟ್ಟಿರುವ ಇಮಾಮಸಾಬ ತಮ್ಮ 11 ನೇ ವಯಸ್ಸಿನಲ್ಲಿ ನರಗುಂದದ ಸಿಂಗಾಡೆ ಎಂಬ ಹಾಲುಮತದ ಮನೆತನವೊಂದರಲ್ಲಿ ಜೀತಕ್ಕೆ ಇದ್ದರು. ಅಲ್ಲಿ ಕುರಿ ಕಾಯುವ ಕೆಲಸದಲ್ಲಿ ಇಮಾಮಸಾಬ ತೊಡಗುತ್ತಿದ್ದರು. ಆ ಸಂದರ್ಭದಲ್ಲಿ ಕುರಿ ಕಾಯುತ್ತ ಹೊರಟಾಗ ಪದಗಳ ರಚನೆ ಮಾಡುತ್ತಾ, ಹಾಡುತ್ತಾ ಹೊರಟ ಇಮಾಮಸಾಬ ಜಾನಪದ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.
ಇವರು ಹಾಡಿರುವ ಒಂದು ಹಾಡು ಜನಪ್ರಿಯಗೊಂಡಿದೆ. ಈ ಹಾಡನ್ನು 20 ಮಿಲಿಯನ್ ಜನರು ಕೇಳಿದ್ದಾರೆ. ಇಂದಿಗೂ ಈ ಹಾಡು ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.
” ಜಾತಿ ಜಾತಿ ಅಂತ ನಾವು ಜಗಳ ಮಾಡತೇವಿರಿ, ಜಾತಿಯೊಳಗ ನೀತಿ ಮಾರ್ಗ ಮರೆತಬಿಟ್ಟಿವಿರಿ ಈ ಹಾಡು ಮನೆಮಾತಾಗಿದೆ. ತಂದೆ, ತಾಯಿ ಸಹ ಕಲಾವಿದರಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಹಾಡುವದನ್ನು ಕರಗತ ಮಾಡಿಕೊಂಡಿರುವ ಇಮಾಮಸಾಬ ಒಲ್ಲೆಪ್ಪನವರಿಗೆ ಕರ್ನಾಟಕ ಸರ್ಕಾರ, ತಡವಾಗಿಯಾದರು ಗುರುತಿಸಿದೆ. ನವಲಗುಂದ ತಾಲೂಕಿನ ನಾಗನೂರು ಗ್ರಾಮದ ಇಮಾಮಸಾಬ, ಇಂದಿಗೂ ಜಾನಪದ ತಂಡ ಕಟ್ಟಿಕೊಂಡು ಕಾರ್ಯಕ್ರಮ ನೀಡುತ್ತಾರೆ. ಅವರು ಕೊಟ್ಟಷ್ಟೆ ಹಣ ಪಡೆದು, ಬಾಂಧವ್ಯದ ಬೆಸುಗೆ ಹಾಕುತ್ತಾರೆ. ಇಮಾಮಸಾಬರಿಗೆ ಕರ್ನಾಟಕ ಫೈಲ್ಸ್ ಪರವಾಗಿ ಅಭಿನಂದನೆಗಳು
