ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇದೇ ದಿನಾಂಕ 13 ರಂದು ಉಪ ಚುನಾವಣೆ ನಡೆಯುತ್ತಿದೆ.
ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಮೂರು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಗ ಭರತ ಬೊಮ್ಮಾಯಿ ಹಾಗೂ ಕಾಂಗ್ರೇಸ್ಸಿನ ಯಾಸಿರ್ ಖಾನ್ ಪಠಾಣ ನಡುವೆ ನೇರ ಹಣಾಹಣಿ ಇದೆ.
ನಿನ್ನೆಯಷ್ಟೇ ಎರಡು ಪಕ್ಷಗಳ ದಿಗ್ಗಜ ನಾಯಕರು ಕ್ಷೇತ್ರದಲ್ಲಿ ಬೃಹತ್ ಸಭೆ ನಡೆಸಿ, ಅಬ್ಬರಿಸಿ ಹೋಗಿದ್ದು, ನಾಳಿದ್ದು ಮತದಾನ ನಡೆಯಲಿದೆ.
ಆರಂಭದಲ್ಲಿ ಕಾಂಗ್ರೇಸ್ಸಿನಲ್ಲಿ ಭಿನ್ನಮತ ಕಾಣಿಸಿಕೊಂಡಿದ್ದರು, ತದನಂತರ ನಾಯಕರು, ಒಕ್ಕಟ್ಟು ಪ್ರದರ್ಶನ ಮಾಡಿದ್ದು, ಕಾಂಗ್ರೇಸ್ ನಾಯಕರು ತಂಡವಾಗಿ ಕೆಲಸ ಮಾಡಿದ್ದಾರೆ.
ಸಚಿವ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ್, ಈಶ್ವರ ಖಂಡ್ರೆ, ಜಮೀರ ಅಹ್ಮದ ಖಾನ್, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ 25 ಕ್ಕೂ ಹೆಚ್ಚು ಶಾಸಕರು ಕಾಂಗ್ರೇಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಮತ್ತೊಂದೆಡೆ, ಬಿಜೆಪಿ ಅಭ್ಯರ್ಥಿ ಭರತ ಗೆಲ್ಲಿಸಲು ಬಿಜೆಪಿ ರಾಜ್ಯ ನಾಯಕರು ಒಕ್ಕಟ್ಟು ಪ್ರದರ್ಶನ ಮಾಡಿದ್ದರು ಸಹ ಸ್ಥಳೀಯ ನಾಯಕರ ಭಿನ್ನಮತ ಶಮನವಾಗಿಲ್ಲ ಎನ್ನಲಾಗಿದೆ. ಶಿಗ್ಗಾವಿ ಕ್ಷೇತ್ರದ ಬಿಜೆಪಿಯಲ್ಲಿ ಸಣ್ಣ ಅಸಮಾಧಾನದ ಹೊಗೆಯಾಡುತ್ತಿದ್ದು, ಚುನಾವಣಾ ಕಣ ಕುತೂಹಲ ಮೂಡಿಸಿದೆ.
ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಲ್ಲಾದ ಜೋಶಿ, ಜಗದೀಶ ಶೆಟ್ಟರ, ಬಸನಗೌಡ ಪಾಟೀಲ ಯತ್ನಾಳ, ಬಿ ವೈ ರಾಘವೇಂದ್ರ, ಬಿ ವೈ ವಿಜಯೇಂದ್ರ, ಸಿ ಟಿ ರವಿ, ಛಲವಾದಿ, ಸೇರಿದಂತೆ ಭಾಜಪ ನಾಯಕರು ಪ್ರಚಾರ ನಡೆಸಿ ಹೋಗಿದ್ದಾರೆ.
ನಾಳಿದ್ದು ಮತದಾನ ನಡೆಯಲಿದ್ದು, ಮತದಾರ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾನೆ. ಅಂತಿಮವಾಗಿ ಮತದಾರ ಯಾರಿಗೆ ಜೈ ಅನ್ನುತ್ತಾನೆ ಅನ್ನೋದನ್ನ ಕಾದು ನೋಡಬೇಕಿದೆ.
