ಬೆಂಗಳೂರಿನ ನಂತರ ಎರಡನೇ ಅತೀ ದೊಡ್ಡ ಮಹಾನಗರ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ, ಹದಗೆಟ್ಟು ಹೋಗಿದೆ. ಒಂದರ ಮೇಲೊಂದರಂತೆ ಅಲ್ಲಿನ ಹಗರಣಗಳು ಹೊರಗೆ ಬರುತ್ತಿವೆ.
ನಗರಾಭಿವೃದ್ಧಿ ಪ್ರಾಧಿಕಾರದ ಮಾಲೀಕತ್ವದ, ಕೆ ಸಿ ಡಿ ಕಾಲೇಜಿನಿಂದ ಕೂಗಳತೆ ದೂರದಲ್ಲಿರುವ ಬೆಲೆ ಬಾಳುವ 6 ಗುಂಟೆ ಜಮೀನನ್ನು ಯಾವದೇ ನಿಯಮ ಪಾಲಿಸದೇ ಕಡಿಮೆ ದರಕ್ಕೆ ನೀಡಿರುವ ಅಂಶ ಬೆಳಕಿಗೆ ಬಂದಿದೆ.
ಧಾರವಾಡದ ಕೆಲಗೇರಿ ರಸ್ತೆಯಲ್ಲಿರುವ ಆರುವರೆ ಸಾವಿರ ಚದರ ಅಡಿ ನಿವೇಶನವನ್ನು ಕೇವಲ ಒಂದು ಕೋಟಿ 20 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಮೂಲೆಯ ನಿವೇಶನ ( ಕಾರ್ನರ್ ಸೈಟ್ ) ವನ್ನು ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿ ಕೊಡಬೇಕಿತ್ತು. ಪತ್ರಿಕೆಯಲ್ಲಿ ಈ ಬಗ್ಗೆ ಮಾಹಿತಿ ಪ್ರಕಟ ಮಾಡಬೇಕಿತ್ತು. ಆದರೆ ಏಕಾಏಕಿ ಬೆಲೆ ಬಾಳುವ ನಿವೇಶನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿರುವದು ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ಇದರಿಂದಾಗಿ ಪ್ರಾಧಿಕಾರಕ್ಕೆ ಎರಡು ಕೋಟಿ ನಷ್ಟವಾಗಿದೆ ಎನ್ನಲಾಗಿದೆ.
ಈ ಮಾಹಿತಿ ಪ್ರಾಧಿಕಾರದ ಒಳಗಡೆಯಿಂದಲೇ ಹೊರಬಿದ್ದಿದ್ದು, ನಿವೇಶನ ಮಾರಾಟ ಮಾಡುವಾಗ ಯಾವದೇ ನಿಯಮ ಪಾಲಿಸದೇ ಇರುವದು ಕೆಂಗಣ್ಣಿಗೆ ಗುರಿಯಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಗೋಲ್ಮಾಲ್, ಮೈಸೂರಿನ “ಮೂಡಾ ” ನ್ನು ಮೀರಿಸಿದ್ದು, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಅಂದಾದುಂದಿ ದರ್ಬಾರ್ ನಡೆದಿದೆ ಅನ್ನೋದು ಮಾತ್ರ ಕನ್ನಡಿಯಷ್ಟೇ ಸ್ಪಷ್ಟ.
