ನಿನ್ನೇ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಹೊಸೂರನಲ್ಲಿ ಹಾಡುಹಗಲೇ ನಡೆದ, ವಕೀಲ ಕಣ್ಣನ ಅವರ ಕೊಲೆಯನ್ನು ಖಂಡಿಸಿ, ಧಾರವಾಡದಲ್ಲಿಂದು ವಕೀಲರು ಬೃಹತ್ ಪ್ರತಿಭಟನೆ ನಡೆಸಿದ್ರು.
ಜಿಲ್ಲಾ ನ್ಯಾಯಾಲಯದಲ್ಲಿ ಸಭೆ ಸೇರಿದ ವಕೀಲರು ಘಟನೆಯನ್ನು ಅತ್ಯುಗ್ರವಾಗಿ ಖಂಡಿಸಿದರು. ಕಣ್ಣನ ಅವರಿಗೆ ಸಂತಾಪ ಸೂಚಿಸಿದ ವಕೀಲರ ಸಂಘ, ಕೊಲೆ ಖಂಡಿಸಿ, ಕೋರ್ಟ ಕಲಾಪ ಬಹಿಷ್ಕರಿಸಿತು.
ನಂತರ ಜೂಬಿಲಿ ಸರ್ಕಲ್ ನಲ್ಲಿ ಧರಣಿ ನಡೆಸಿ, ಕಣ್ಣನ ಎಂಬ ವಕೀಲರ ಕೊಲೆ ಮಾಡಿದ ಪಾತಕಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ರು. ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದ ವಕೀಲರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು.
ಆರೋಗ್ಯಕರ ಸಮಾಜದ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ವಕೀಲರ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು ಇನ್ನೂರು ವಕೀಲರು ಭಾಗವಹಿಸಿದ್ದರು.
