ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೆಲುವಿಗೆ ಕಾರಣರಾದ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಫೆಬ್ರವರಿ ವೇಳೆಗೆ ವಿಧಾನ ಪರಿಷತ ಸದಸ್ಯರಾಗುತ್ತಾರೆ ಎನ್ನಲಾಗಿದೆ.
ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಖಾದ್ರಿಯವರು, ಕಡೆ ಘಳಿಗೆಯಲ್ಲಿ, ಪಕ್ಷದ ವಿರುದ್ಧ ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಿದ ಮರುದಿನವೇ, ಖಾದ್ರಿಯವರನ್ನು ಬೆಂಗಳೂರಿಗೆ ಕರೆಸಿಕೊಂಡ ಮುಖ್ಯಮಂತ್ರಿಗಳು, ಅಸಮಾಧಾನ ಶಮನಗೊಳಿಸಿದ್ದರು.
ಜನೆವರಿ ಕೊನೆಯ ವಾರದಲ್ಲಿ ತೆರವಾಗುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಕೊಟ್ಟಿದ್ದಾರೆ ಎನ್ನಲಾಗಿದೆ. ಇದಾದ ನಂತರ, ಸಚಿವ ಜಮೀರ್ ಅಹ್ಮದ್ ಖಾನ್ ಸಮ್ಮುಖದಲ್ಲಿ ಖಾದ್ರಿ ನಾಮಪತ್ರ ವಾಪಸ ಪಡೆದಿದ್ದರು.
ಕಾಂಗ್ರೇಸ್ ಅಭ್ಯರ್ಥಿ ಯಾಸಿರ್ ಖಾನ ಪಠಾಣ ಪರ ಪ್ರಚಾರದಲ್ಲಿ ತೊಡಗಿದ್ದ ಖಾದ್ರಿ, ಪಠಾಣರನ್ನು ಗೆಲ್ಲಿಸಿಕೊಂಡು ಬರುವದಾಗಿ, ಸಿದ್ದರಾಮಯ್ಯನವರಿಗೆ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಖಾದ್ರಿ ನಡೆದುಕೊಂಡಿದ್ದು, ಸ್ವತಃ ಸಿದ್ದರಾಮಯ್ಯನವರು ದೂರವಾಣಿ ಮೂಲಕ ಖಾದ್ರಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಹುತೇಕ ಫೆಬ್ರವರಿ ವೇಳೆಗೆ ಅಜ್ಜಂಪೀರ ಖಾದ್ರಿಯವರು ವಿಧಾನ ಪರಿಷತಗೆ ನೇಮಕವಾಗುವ ಸಾಧ್ಯತೆ ಇದೆ.