ನವಲಗುಂದದ ಕಾಲವಾಡ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಹುಬ್ಬಳ್ಳಿ ನವಲಗುಂದ ರಸ್ತೆಯಲ್ಲಿರುವ ಜೋಡು ಆಂಜನೇಯ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದ್ದು, ಬೈಕ್ ಸವಾರರು ಎಮ್ಮೆಗೆ ಡಿಕ್ಕಿ ಹೊಡೆದಿದ್ದಾರೆ.
ಇದಕ್ಕೂ ಮುನ್ನ ಎಮ್ಮೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ, ಎಮ್ಮೆ ರಸ್ತೆಯ ಮಧ್ಯೆಯೇ ಸಾವನ್ನಪ್ಪಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ವೇಗವಾಗಿ ಬಂದ ಬೈಕ್ ಸತ್ತು ಬಿದ್ದಿದ್ದ ಎಮ್ಮೆಗೆ ಡಿಕ್ಕಿ ಹೊಡೆದಿದೆ.
ಬೈಕ್ ಸವಾರರನ್ನು ಹುಬ್ಬಳ್ಳಿ ಬಳಿ ಇರುವ ಅಂಚಟಗೇರಿ ನಿವಾಸಿಗಳು ಎನ್ನಲಾಗಿದ್ದು, ಹುಬ್ಬಳ್ಳಿಯತ್ತ ಹೊರಟಾಗ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.