ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚೆಗೆ ಕೆಎಎಸ್ ಪರೀಕ್ಷೆಯಲ್ಲಿ ಮಾಡಿದ ಕನ್ನಡ ಭಾಷಾಂತರ ಆವಾಂತರ ದೊಡ್ಡ ಸುದ್ದಿ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯಲ್ಲಿರುವ ಕಾನೂನು ವಿಶ್ವವಿದ್ಯಾಲಯ ಅದ್ವಾನ ಮಾಡಿಕೊಂಡಿದೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾನೂನು ಪದವಿ ಪ್ರಮಾಣಪತ್ರದಲ್ಲಿ ಬ್ಯಾಚರಲ್ ಆಫ್ ಲಾ ಎಂದು ಮುದ್ರಣವಾಗುವ ಬದಲು ಬ್ಯಾಚರಲ್ ಆಫ್ ಲಾಸ್ ಎಂದು ಮುದ್ರಣವಾಗಿದೆ.
ಪದವಿ ಪ್ರಮಾಣ ಪತ್ರ ಹೊರಗೆ ಬಿಡಬೇಕಾದರೆ ಕೂಲಂಕುಷವಾಗಿ ಪರಿಶೀಲಿಸಿ ಬಿಡಬೇಕು. ಆದರೆ ಇಲ್ಲಿ ಕಾನೂನು ವಿಶ್ವವಿದ್ಯಾಲಯದ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಲಾ ಅನ್ನೋದು ಲಾಸ್ ಆಗಿದೆ.
ಮುಂಬೈ ರಾಜ್ಯದ ಕಾನೂನು ಮಂತ್ರಿಯಾಗಿದ್ದ, ಕನ್ನಡಿಗ ಹುಬ್ಬಳ್ಳಿಯ ಸರ್ ಸಿದ್ದಪ್ಪ ಕಂಬಳಿ ಅವರ ಮೊಮ್ಮಗ ಹುಬ್ಬಳ್ಳಿಯ ಕೆನರಾ ಬ್ಯಾಂಕಿನ ನಿವೃತ್ತ ಹಿರಿಯ ವ್ಯವಸ್ಥಾಪಕ, ಸಿದ್ದಲಿಂಗಪ್ಪ ಆಯ್. ಕಂಬಳಿ ಅವರು ತಮ್ಮ ನಿವೃತ್ತಿಯ ನಂತರ 2021 ರಲ್ಲಿ ಹುಬ್ಬಳ್ಳಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ.
ಅವರಿಗೆ ಕೊಟ್ಟಿರುವ ಕಾನೂನು ಪದವಿ ಪ್ರಮಾಣ ಪತ್ರದಲ್ಲಿ ಲಾ ಬದಲು ಲಾಸ್ ಎಂದು ಮುದ್ರಣವಾಗಿದೆ.
ಇತ್ತೀಚೆಗೆ 2024ರಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪೂರೈಸಿದ ಅವರ ಕಾನೂನು ಪದವಿ ಪ್ರಮಾಣ ಪತ್ರದಲ್ಲಿ ಕನ್ನಡ ಭಾಷಾಂತರದಲ್ಲಿ ತಪ್ಪುಗಳು ನುಸುಳಿವೆ.
ಅವರ ಹೆಸರು ಸಿದ್ದಲಿಂಗಪ್ಪ ಆಯ್ . ಕಂಬಳಿ ಎಂದು ಇರಬೇಕಾಗಿತ್ತು. ಅದನ್ನು ಸಿದ್ದಲಿಂಗಪ್ಪ ಆಯ್. ಕಾಂಬಳಿ ಎಂದು ಮುದ್ರಣವಾಗಿದೆ.
Bachelor of Laws (L.L.B) ಎಂದು ಇಂಗ್ಲೀಷ್ ನ ಭಾಷಾಂತರ ಕನ್ನಡದಲ್ಲಿ ಬ್ಯಾಚ್ ಲರ್ ಆಫ್ ಲಾಸ್ ಪದವಿ (ಎಲ್. ಎಲ್. ಬಿ.) ಎಂದು ತಪ್ಪಾಗಿ ಮುದ್ರಿಸಲಾಗಿದೆ.