ನಾಡಿನ ಹಿರಿಯ ವಿದ್ವಾಂಸ ಮತ್ತು ಸಾಮಾಜಿಕ ಚಿಂತಕ ಪ್ರೊ.ಮುಝಾಫರ್ ಅಸ್ಸಾದಿ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಪ್ರೊ.ಅಸ್ಸಾದಿ ಕೇವಲ ಒಬ್ಬ ಪ್ರಾಧ್ಯಾಪಕ ಆಗಿರಲಿಲ್ಲ. ನಾಡಿನ ಜನಪರ ಹೋರಾಟವನ್ನು, ವೈಚಾರಿಕ ಚಿಂತನೆಯ ಮಾರ್ಗದರ್ಶನದೊಂದಿಗೆ ಮುನ್ನಡೆಸಿದವರು ಎಂದು ಅವರನ್ನು ಸ್ಮರಿಸಿಕೊಂಡಿದ್ದಾರೆ.
ಅವರ ಅಗಲಿಕೆಯಿಂದ ನಾಡು ಬಡವಾಗಿದೆ, ಅವರ ಅಗಲಿಕೆಯಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕಷ್ಟ ಎಂದಿರುವ ಸಿದ್ದರಾಮಯ್ಯ, ನಿರಂತರವಾದ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿಯೂ ತಮ್ಮ ವಿದ್ವತ್‌ಪೂರ್ಣ ಬರವಣಿಗೆ ಮತ್ತು ಉಪನ್ಯಾಸಗಳ ಮೂಲಕ ಜನಪ್ರಿಯರಾಗಿದ್ದರು ಎಂದಿದ್ದಾರೆ.
ಪ್ರೊ.ಅಸ್ಸಾದಿ ಅವರು ಕನ್ನಡದ ಹೆಮ್ಮೆಯ ಪುತ್ರರಾಗಿದ್ದರು. ಹಲವು ವರ್ಷಗಳಿಂದ ನನ್ನ ಹಿತೈಷಿಯಾಗಿ, ರಾಜಕೀಯವಾಗಿ ಸದಾ ನನ್ನ ಏಳಿಗೆಯನ್ನು ಹಾರೈಸುತ್ತಿದ್ದ ಪ್ರೊ.ಅಸ್ಸಾದಿ ಅವರ ಸಾವು ವೈಯಕ್ತಿಕವಾಗಿಯೂ ನನ್ನ ಪಾಲಿಗೆ ದೊಡ್ಡ ನಷ್ಟ ಎಂದು ತಿಳಿಸಿದ್ದಾರೆ.