ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ನಡುಬೀದಿಯಲ್ಲಿಯೇ ಚಾಕು ಚೂರಿ ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದೆ.
ಮರ್ಯಾದಾ ಹತ್ಯೆಗೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳಿಗೆ ಗದಗ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವ ಜೋಡಿಗಳನ್ನು ಮರ್ಯಾದೆಗೆ ಧಕ್ಕೆ ಬಂದಿದೆ ಎಂದು ಹೇಳಿ ಹುಡುಗಿ ಮನೆಯವರು ಇಬ್ಬರನ್ನು ಕೊಲೆ ಮಾಡಿದ್ದರು. ಇದು ದೊಡ್ಡ ಸುದ್ದಿ ಮಾಡಿತ್ತು.
ರಮೇಶ ಮಾದರ ಮತ್ತು ಗಂಗಮ್ಮ ಮಾದರ ಎಂಬುವವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.
ಇಬ್ಬರನ್ನು ನವೆಂಬರ್ 6, 2019 ರಲ್ಲಿ ಗಂಗಮ್ಮ ಕುಟುಂಬಸ್ಥರು ಕೊಲೆ ಮಾಡಿದ್ದರು.
ಕುಟುಂಬಸ್ಥರ ವಿರೋದದ ನಡುವೆ ಗಂಗಮ್ಮ ಪ್ರೀತಿಸಿ ಅಂತರಜಾತಿ ವಿವಾಹ ಆಗಿದ್ದಕ್ಕೆ ಗಂಗಮ್ಮ ಸಂಬಂಧಿಕರು ಗರಂ ಆಗಿದ್ದರು.
ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..
ಐಪಿಸಿ 427, 449, 302, 506(2) ಅಡಿಯಲ್ಲಿ ನ್ಯಾಯಾಲಯಕ್ಕೆ, ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ರು..
ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯವು ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಆರೋಪಿಗಳಾದ, ಶಿವಪ್ಪ ರಾಠೋಡ, ರವಿಕುಮಾರ ರಾಠೋಡ, ರಮೇಶ ರಾಠೋಡ ಹಾಗೂ ಸಾರಿಗೆ ಇಲಾಖೆ ಚಾಲಕ ಪರಶುರಾಮ ರಾಠೋಡಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.