ಕೊವಿಡ್ ಅಥವಾ ಕೊವಿಡ್ ಲಸಿಕೆಯ ಅಡ್ಡಪರಿಣಾಮದಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಮುಂದೆ ಇಂತಹ ಸಾವುಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಸಮರ್ಪಕ ಸಂಶೋಧನೆ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ಒಂದು ಸಮಿತಿ ರಚನೆಗೆ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಿರುವ ಅವರು, ಕೊರೊನಾ ನಂತರ ಎಳೆಯ ವಯಸ್ಸಿನವರು, ಯುವಜನರು ಸೇರಿದಂತೆ ಬದುಕಿ ಬಾಳಬೇಕಾದವರು ಇದ್ದಕ್ಕಿದ್ದಂತೆ ಇಲ್ಲವಾಗುತ್ತಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ.
ಇವರನ್ನು ನಂಬಿದ ಕುಟುಂಬಗಳು ಬೀದಿಪಾಲಾಗುತ್ತಿವೆ. ಇದೊಂದು ಗಂಭೀರ ಸಮಸ್ಯೆ, ಆದಷ್ಟು ಶೀಘ್ರ ಈ ಸಮಸ್ಯೆಯ ಮೂಲ ಪತ್ತೆಮಾಡಿ, ಪರಿಹರಿಸಬೇಕು ಎನ್ನುವುದು ನನ್ನ ಯೋಚನೆಯೂ ಆಗಿತ್ತು ಎಂದಿದ್ದಾರೆ.
ಈ ಸಮಸ್ಯೆಯ ಬಗ್ಗೆ ಗಮನ ಸೆಳೆದ ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರು ಬರೆದ ಪತ್ರ ನನ್ನ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಪ್ರೇರಣೆಯಾಯಿತು ಎಂದಿದ್ದಾರೆ.
ತಜ್ಞರು ಹಾಗೂ ವಿಜ್ಞಾನಿಗಳ ಸಮಿತಿ ನೀಡುವ ವರದಿಯನ್ನು ಆಧರಿಸಿ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
![Karnataka Files](https://secure.gravatar.com/avatar/3c8a792dfb280b36a94603273157ff83?s=96&r=g&d=https://karnatakafiles.com/wp-content/plugins/userswp/assets/images/no_profile.png)